ಜಿಲ್ಲೆ

ಭೂ ಅತಿಕ್ರಮಣಕಾರರ ಪಟ್ಟಿ ಕೊಡಿ: ಅಧಿಕಾರಿಗಳಿಗೆ ಡಿಸಿ ಡಾ. ಸೆಲ್ವಮಣಿ ಸೂಚನೆ

ಸೊರಬ: ಸರ್ಕಾರಿ ಕಟ್ಟಡ ಇತರ ಅಭಿವೃದ್ಧಿ ಕೆಲಸಗಳಿಗೆ ಜಾಗಗಳನ್ನು ಮಂಜೂರಾತಿ ಮಾಡಲಾಗುತ್ತದೆ. ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ ಬಗ್ಗೆ ಪಟ್ಟಿ ಮಾಡಿ ತಮ್ಮ ಕಚೇರಿಗೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನ್ಯಾಯಾಲಯದಿಂದ ತಡೆಯಾಜ್ಞೆ ಇಲ್ಲದಿದ್ದರೂ ಕೆಲವರು ಸುಳ್ಳು ಹೇಳಿ ಸರ್ಕಾರಿ ಅಧಿಕಾರಿಗಳ ದಾರಿ ತಪ್ಪಿಸುವ ಕೆಲಸ ಮಾಡುತ್ತ ಅಭಿವೃದ್ಧಿಗೆ ಹಿನ್ನಡೆ ಮಾಡುತ್ತಿದ್ದಾರೆ. ಆದ್ದರಿಂದ ಸೂಕ್ತ ದಾಖಲೆಗಳೊಂದಿಗೆ ಮಾಹಿತಿ ಪಡೆದು ಅಭಿವೃದ್ಧಿ ಕೆಲಸಗಳಿಗೆ ಮುಂದಾಗುವಂತೆ ತಿಳಿಸಿದರು.

ಸರ್ಕಾರ ನಡೆಯುವುದು ದಾಖಲೆಗಳ ಮೇಲೆ. ಯಾವುದೇ ತಂಟೆ, ತಕರಾರು ಇದ್ದರೆ ಅವುಗಳನ್ನು ದಾಖಲೆಗಳ ಮೂಲಕ ಪರಿಶೀಲಿಸಿ ಸೂಕ್ತ ಉತ್ತರ ನೀಡಬೇಕು. ಇದಕ್ಕಾಗಿ ಕಾಲಹರಣ ಮಾಡುತ್ತ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಬಾರದು ಎಂದರು.

ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ಸೊರಬ ಬನ್ನಿ ಮಂಟಪಕ್ಕೆ ನಿಗದಿಪಡಿಸಿದ ಜಾಗದಲ್ಲಿ ಅತಿಕ್ರಮಣ ಆಗಿರುವ ಬಗ್ಗೆ, ಅಂಚೆ ಕಚೇರಿ ಪಕ್ಕದಲ್ಲಿ ಖಾಸಗಿ ವ್ಯಕ್ತಿ ಪುರಸಭೆ ಜಾಗದಲ್ಲಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಿರುವುದು, ಸರ್ವೇ ನಂ.113ರಲ್ಲಿ ಅಕ್ರಮವಾಗಿ ಹಕ್ಕು ಪತ್ರ ಪಡೆದಿರುವುದು, ಅಗ್ನಿಶಾಮಕ ಠಾಣೆಯ ಎದುರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದನ್ನು ಹಾಗೂ ಹಳೆಯ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಮನೆ ಕಟ್ಟಿಕೊಂಡಿದ್ದನ್ನು ಇನ್ನೂ ತೆರವುಗೊಳಿದೆ ಇರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸರ್ವೇ ನಂ.113ರಲ್ಲಿ ಅಕ್ರಮವಾಗಿ ಮಂಜೂರಾತಿಯಾದ ಬಗ್ಗೆ ಪ್ರತ್ಯೇಕ ದಾವೆ ಹೂಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ತಾಲೂಕಿನ ಗೆಂಡ್ಲ ಹೊಸೂರು ಗ್ರಾಮದಲ್ಲಿ ಖಾಸಗಿ ವ್ಯಕ್ತಿ ಹೆಸರಿನಲ್ಲಿ 60ಕ್ಕೂ ಹೆಚ್ಚು ಮನೆಗಳಿದ್ದು, ಅವುಗಳಿಗೆ ಹಕ್ಕುಪತ್ರ ನೀಡುವಂತೆ ನಿವಾಸಿಗಳು ಕೋರಿದ್ದಾರೆ. ಈ ಬಗ್ಗೆ ಖಾಸಗಿ ವ್ಯಕ್ತಿ ಬಿಟ್ಟುಕೊಡಲು ತಯಾರಿಲ್ಲ ಎಂದು ಶಾಸಕರು ಗಮನ ಸೆಳೆದಾಗ, 10ಕ್ಕೂ ಹೆಚ್ಚು ಮನೆಗಳು ಖಾಸಗಿ ವ್ಯಕ್ತಿಯ ಜಮೀನಿನಲ್ಲಿದ್ದರೆ ಅಂತಹವುಗಳಿಗೆ ಹಕ್ಕುಪತ್ರ ನೀಡಲು ಅವಕಾಶವಿದ್ದು ಖಾಸಗಿ ವ್ಯಕ್ತಿ ಆ ಜಾಗಕ್ಕೆ ಪರಿಹಾರ ಪಡೆಯಲು ಅವಕಾಶವಿದೆ. ಈ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಹೇಳಿದರು.

ಅಂದವಳ್ಳಿಯಲ್ಲಿ ಗೋಶಾಲೆಗೆ ತ್ವರಿತ ಭೂಮಿ ಮಂಜೂರಾತಿ ಮಾಡುವುದಾಗಿ ತಿಳಿಸಿದ ಅವರು, ಬೀದಿನಾಯಿ ಮತ್ತು ಬೀಡಾಡಿ ದನ, ಆನವಟ್ಟಿಯಲ್ಲಿ ಹಂದಿ ಹಾವಳಿ ಬಗ್ಗೆ ಪ್ರಸ್ತಾಪಿಸಿದ ಶಾಸಕರಿಗೆ ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಪುರಸಭೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಒಂದು ಕೊಠಡಿ ಇರುವಂತಹ ಕಟ್ಟಡ ನಿರ್ಮಾಣ ಮಾಡಬೇಕು. ರಸ್ತೆಯನ್ನು ಎಲ್ಲೆಂದರಲ್ಲಿ ಒಡೆದು ಹಾಕಿ ಪೈಪ್‌ಲೈನ್, ಕೇಬಲ್ ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮದಲ್ಲಿ ನಿವೇಶನಕ್ಕಾಗಿ ಜಾಗ ಮಂಜೂರಾತಿ ಮಾಡಲು ಅವಕಾಶವಿಲ್ಲ. ಯಾರಿಗೆ ನಿವೇಶನ ಇಲ್ಲ ಎಂಬುದರ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಪಟ್ಟಿ ಮಾಡಿ ಕಳುಹಿಸಿದರೆ ಎಷ್ಟು ಎಕರೆ ಭೂಮಿ ಬೇಕಾಗುತ್ತದೆ ಎಂಬುದನ್ನು ನೋಡಿ ಜಾಗ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸುಳ್ಳು ಹಕ್ಕುಪತ್ರ ಪಡೆದವರ ಖುಲ್ಲಾ ಮಾಡಿ: ಗ್ರಾಮೀಣ ಹಾಗೂ ಪುರಸಭಾ ವ್ಯಾಪ್ತಿಯಲ್ಲಿ 94ಸಿ ಮತ್ತು 94ಸಿಸಿ ಅಡಿಯಲ್ಲಿ ಸುಳ್ಳು ಹಕ್ಕುಪತ್ರ ಪಡೆದು ಈಗಾಗಲೇ ವಾಸವಾಗಿರುವ ಅವರನ್ನು ಖುಲ್ಲಾ ಪಡಿಸುವಂತೆ ಅದೇಶವಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ಕುಮಾರ್ ಬಂಗಾರಪ್ಪ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಯಾರು ಅರ್ಹರಾಗಿರುವುದಿಲ್ಲ. ಅಂತಹವರನ್ನು ಖುಲ್ಲಾ ಪಡಿಸಬೇಕು. ಪಟ್ಟಣದ ಹೊಸಪೇಟೆ ಬಡಾವಣೆ ಸರ್ವೇ ನಂ.172ರಲ್ಲಿ ಈಗಾಗಲೇ ವಾಸವಿರುವವರಿಗೆ ಹಕ್ಕುಪತ್ರ ನೀಡುವ ಬಗ್ಗೆ ಸರ್ವೇ ಕಾರ್ಯ ಮಾಡಬೇಕು. ಇನಾಂ ಜಮೀನಿನ ಬಗ್ಗೆ ಸೂಕ್ತ ಮಾಹಿತಿ ಪಡೆಯಬೇಕು ಎಂದು ಹೇಳಿದರು.