ಶನಿವಾರಸಂತೆ: ಸೋಮವಾರಪೇಟೆ ತಾಲೂಕಿನ ಬಾಣವಾರ ಮೀಸಲು ಅರಣ್ಯ ವ್ಯಾಪ್ತಿಯ ಭುವಂಗಾಲ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಮರಿಯಾನೆ, 2 ಗಂಡಾನೆ ಸೇರಿದಂತೆ ಒಟ್ಟು 11 ಕಾಡಾನೆ ಹಿಂಡು ಸಂಚರಿಸುತ್ತಿದ್ದು, ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು, ವಾಹನ ಸವಾರರು ಭಯಭೀತರಾಗಿದ್ದಾರೆ.
ಗ್ರಾಮಕ್ಕೆ ಹೋಗುವ ರಸ್ತೆಯ ಎರಡು ಬದಿಯಲ್ಲಿ ಬಾಣಾವಾರ ಮೀಸಲು ಅರಣ್ಯ ಇದ್ದು ಕಾಡಿನಿಂದ ಬಂದ ಕಾಡಾನೆಗಳ ಹಿಂಡು ಹಗಲು -ರಾತ್ರಿ ಎನ್ನದೆ ರಸ್ತೆ ಮಧ್ಯದಲ್ಲಿ ಹಿಂಡು ಹಿಂಡಾಗಿ ಸಂಚರಿಸುತ್ತಿರುವುದನ್ನು ಕಂಡು ಗ್ರಾಮಸ್ಥರು ಭಯಗೊಂಡಿದ್ದಾರೆ. ಇಲ್ಲಿ ಒದೆರಡು ಕಾಡಾನೆಗಳು ಸಂಚರಿಸುವುದು ಗ್ರಾಮಸ್ಥರಿಗೆ ಮಾಮೂಲಿಯಾಗಿದೆ. ಆದರೆ ಸುಮಾರು 11 ಕಾಡಾನೆ ಹಿಂಡು ಹಗಲು-ರಾತ್ರಿ ಎನ್ನದೆ ಗ್ರಾಮದ ರಸ್ತೆ ಮಧ್ಯೆ ಓಡಾಡುತ್ತಿರುವುದು ಇದೆ ಮೊದಲ ಬಾರಿಯಾಗಿದ್ದು, ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಸೋಮವಾರ ಸಂಜೆ ಮರಿಯಾನೆ ಸೇರಿದಂತೆ 9 ಕಾಡಾನೆಗಳ ಹಿಂಡು ಗ್ರಾಮದ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಮತ್ತು ವಾಹನ ಸವಾರರು ಗಾಬರಿಗೊಂಡಿದ್ದಾರೆ. ಗ್ರಾಮಸ್ಥರು ಕೂಗಿ, ಶಬ್ದ ಮಾಡಿ ಕಾಡಾನೆಯನ್ನು ಕಾಡಿಗೆ ಓಡಿಸಲು ಪ್ರಯತ್ನಪಟ್ಟರೂ ಕ್ಯಾರೆ ಎನ್ನದ ಕಾಡಾನೆ ಹಿಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಈ ವೇಳೆ 2 ಗಂಡಾನೆಗಳು ರಸ್ತೆ ಮಧ್ಯೆ ಕಾದಾಟಕ್ಕೆ ಇಳಿದಿರುವುದನ್ನು ಗ್ರಾಮಸ್ಥರು ವಿಡಿಯೋ ಮಾಡಿದ್ದಾರೆ.
ಅಲ್ಲದೆ ಸೋಮವಾರಪೇಟೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಡಾನೆಗಳನ್ನು ಕಾಡಿಗೆ ಅಟ್ಟುವುದರೊಂದಿಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಅರಣ್ಯ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.