ಜಿಲ್ಲೆ

ಭೀಮಾನದಿಗೆ ಹಾರಿ ಯುವತಿ ಆತ್ಮಹತ್ಯೆ

ವಿಜಯಪುರ: ಸೇತುವೆ ಮೇಲಿಂದ ಜಿಗಿದು ಭೀಮಾನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂ-ಅಫಜಲಪುರ ಮಧ್ಯೆ ಇರುವ ಸೇತುವೆ ಬಳಿ ನಡೆದಿದೆ.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಐಶ್ವರ್ಯ ಶ್ರೀಪಾಲ ಕಬ್ಬಿನ (20) ಆತ್ಮಹತ್ಯೆ ಮಾಡಿಕೊಂಡ ಯುವತಿ.
ವಿಜಯಪುರ, ಕಲಬುರಗಿ ಜಿಲ್ಲೆಯ ಅಫಜಲಪುರ ಮಧ್ಯೆದ ಭೀಮಾನದಿಗೆ ಕಟ್ಟಿದ ಸೇತುವೆಗೆ ಯುವತಿ ಹಾರಿದ್ದಾಳೆ. ಕುಟುಂಬಸ್ಥರೊಂದಿಗೆ ಗಾಣಗಾಪುರದ ದತ್ತಾತ್ರೆಯ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿದ್ದ ಅಕ್ಕನ ಮನೆಗೆ ತಾಯಿಯ ಜತೆಗೆ ಬಂದಿದ್ದ ಯುವತಿ. ಇಂಡಿಯಿಂದ ಗಾಣಗಾಪುರಕ್ಕೆ ಭಾನುವಾರ ಮಧ್ಯಾಹ್ನ ಭಾವ, ಅಕ್ಕ, ತಾಯಿ ಹಾಗೂ ಇತರರ ಜತೆಗೆ ತೆರಳುತ್ತಿದ್ದ ವೇಳೆ ಸೇತುವೆ ಮೇಲೆ ವಾಹನವನ್ನು ನಿಲ್ಲಿಸಿ ನದಿಗೆ ಕಾಯಿನ್ ಹಾಕುವ ನೆಪ ಹೇಳಿ ಇಳಿದಿದ್ದ ಐಶ್ವರ್ಯ ನದಿಗೆ ಜಿಗಿದ್ದಾಳೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ಯುವತಿಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.