ಚಿಕ್ಕಮಗಳೂರು: ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆ ಅಂಗವಾಗಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು.
ತೊಗರಿಹಂಕಲ್ ಸರ್ಕಲ್‌ನಿಂದ ಆರಂಭವಾದ ಬೈಕ್ ರ‍್ಯಾಲಿಗೆ ಪಟಾಕಿ ಸಿಡಿಸುವ ಮೂಲಕ ಚಾಲನೆ ನೀಡಲಾಯಿತು. ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪರ ಜಯಘೋಷ ಕೂಗಿ ಸಂಭ್ರಮಿಸಿದರು. ತೊಗರಿಹಂಕಲ್ ವೃತ್ತದಿಂದ ಆರಂಭವಾದ ಬೈಕ್ ರ‍್ಯಾಲಿ ಐ.ಜಿ. ರಸ್ತೆ ಮಾರ್ಗವಾಗಿ ಸಾಗಿ ಟೌನ್ ಕ್ಯಾಂಟಿನ್ ಸರ್ಕಲ್ ಬಳಸಿ ಕೆ.ಇ.ಬಿ. ವೃತ್ತದ ಮೂಲಕ ಹನುಮಂತಪ್ಪ ವೃತ್ತದ ಮಾರ್ಗವಾಗಿ ಎಂ.ಜಿ.ರಸ್ತೆಯಲ್ಲಿ ಸಾಗಿ ಆಜಾದ್ ಮೈದಾನ ತಲುಪಿತು. ನಂತರ ಅಂಬೇಡ್ಕರ್ ರಸ್ತೆ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿಗೆ ಸಾಗಿದ ಬೈಕ್ ರ‍್ಯಾಲಿ ಜಿಲ್ಲಾ ಪಂಚಾಯಿತಿ ಕಛೇರಿ ಮುಂಭಾಗ ಇರುವ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಯಘೋಷ ಕೂಗಿದರು. ರ‍್ಯಾಲಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರದ ಮೆರವಣಿಗೆ ನಡೆಯಿತು. ಇಂದು ನಡೆದ ಬೈಕ್ ರ‍್ಯಾಲಿಯಲ್ಲಿ ಎಲ್ಲಾ ದಲಿತ ಸಂಘಟನೆಗಳ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರುಗಳು ಭಾಗವಹಿಸಿದ್ದರು. ಬುಧವಾರ ಮಧ್ಯಾಹ್ನ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಲಿದ್ದು, ತೊಗರಿಹಂಕಲ್ ಸರ್ಕಲ್‌ನಿಂದ ಆರಂಭವಾಗುವ ಮೆರವಣಿಗೆ ಆಜಾದ್ ಪಾರ್ಕ್ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ.
ಸಂಜೆ ಆಜಾದ್‌ಪಾರ್ಕ್ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಜೇವರ್ಗಿಯ ಶ್ರೀ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿ, ಭೀಮ್ ಆರ್ಮಿ ಸಂಘಟನೆಯ ಸಂಸ್ಥಾಪಕ ಹಾಗೂ ಉತ್ತರ ಪ್ರದೇಶದ ಲೋಕಸಭಾ ಸದಸ್ಯ ಚಂದ್ರಶೇಖರ್ ಆಜಾದ್ ರಾವಣ್, ತಮಿಳುನಾಡಿನ ತಿರುವಳ್ಳುವರ್ ಕ್ಷೇತ್ರದ ಲೋಕಸಭಾ ಸದಸ್ಯ ಶಶಿಕಾಂತ್ ಸೆಂಥಿಲ್, ಪ್ರಗತಿಪರ ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಜಕ್ಕಪ್ಪ ಹಾಗೂ ಅಂಬೇಡ್ಕರ್ ವಾದಿ ದು. ಸರಸ್ವತಿ ಭಾಗಿಯಾಗಲಿದ್ದಾರೆ.