ಜಿಲ್ಲೆ

ಭೀಮನ ಅಮಾವಾಸ್ಯೆ ವಿಶೇಷ ಪೂಜೆ

ಚಾಮರಾಜನಗರ: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸಾವಿರಾರು ಭಕ್ತಾಧಿಗಳು ಕುಟುಂಬ ಸಮೇತರಾಗಿ ಆಗಮಿಸಿ ಗುರುವಾರ ಪೂಜೆ ನೆರವೇರಿತು.

ತಾಲೂಕಿನ ಕುಡ್ಲೂರು ಗ್ರಾಮದ ಶ್ರೀ ಮಂಟೇಸ್ವಾಮಿ ಹಾಗೂ ಶ್ರೀಮಹದೇಶ್ವರ ದೇವಸ್ಥಾನ, ಯಡಬೆಟ್ಟದ ಶ್ರೀಮಹದೇಶ್ವರ, ಚಂದಕವಾಡಿಯ ಶ್ರೀಲಕ್ಷ್ಮೀದೇವಿ ದೇವಸ್ಥಾನ, ನಾಗವಳ್ಳಿ ಗ್ರಾಮದ ಶ್ರೀಗುಡ್ಡದ ಮಹದೇಶ್ವರಸ್ವಾಮಿ ದೇವಾಲಯ, ಮಂಗಲ ಗ್ರಾಮದ ಸಮೀಪದಲ್ಲಿರುವ ಶಂಕರದೇವನ ಬೆಟ್ಟದ ಶ್ರೀಶಂಕರೇಶ್ವರಸ್ವಾಮಿ ದೇವಸ್ಥಾನ, ಸಂತೇಮರಹಳ್ಳಿಯ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ, ಕೊಂಗಳ್ಳಿ ಬೆಟ್ಟದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ಎಣ್ಣೆಹೊಳೆಯ ಶ್ರೀಮಹದೇಶ್ವರಸ್ವಾಮಿ ದೇವಾಲಗಳಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ವಿವಿಧ ಉತ್ಸಾವಾದಿಗಳಲ್ಲಿ ಭಾಗವಹಿಸಿ ಹರಕೆಯನ್ನು ತೀರಿಸಿದರು. ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ದೇವರ ದರ್ಶನ ಪಡೆದುಕೊಂಡರು.

ಆಷಾಢಮಾಸದಲ್ಲಿ ಯಾವುದೇ ಶುಭ ಕಾರ್ಯಗಳಲ್ಲಿ ಭಾಗಿಯಾಗದ ಹೆಚ್ಚಿನ ಜನರು, ಆಷಾಢದ ಭೀಮನ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ಸಡಗರದಿಂದ ಆಚರಿಸುತ್ತಾರೆ. ತಮ್ಮ ಪತಿಗೆ ಆಯಸ್ಸು, ಆರೋಗ್ಯ ಕರುಣಿಸುವಂತೆ ವಿಶೇಷವಾಗಿ ಭೀಮನ ಅಮಾವಾಸ್ಯೆಯ ದಿನ ಪ್ರಾರ್ಥಿಸುತ್ತಾರೆ. ಆಗಾಗಿ ಪ್ರತಿಯೊಂದು ಮನೆಮನೆಗಳಲ್ಲೂ ಶ್ರದ್ಧಾ-ಭಕ್ತಯಿಂದ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಕುಟುಂಬ ಸಮೇತರಾಗಿ ಜನರು ಹತ್ತಿರದ ದೇವಸ್ಥಾನಗಳಿಗೆ ಭೇಟಿ ನೀಡಿ ಹಣ್ಣು-ಕಾಯಿ ಸಮೇತ ವಿಶೇಷ ಪೂಜೆ ಸಲ್ಲಿಸಿದರು.

ಭೀಮನ ಅಮಾವಾಸ್ಯೆಯ ಅಂಗವಾಗಿ ವಿವಿಧ ದೇವಸ್ಥಾನಗಳನ್ನು ವಿಶೇಷವಾದ ಹೂವು ಮತ್ತು ಹಣ್ಣುಗಳಿಂದ ಸಿಂಗರಿಸಲಾಗಿತ್ತು, ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿತ್ತು. ಭಕ್ತಾಧಿಗಳು ಸರದಿಯಲ್ಲಿ ಸಾಗಿ ಪೂಜೆ ಸಲ್ಲಿಸಿದರು. ಹಲವು ದೇವಾಲಯಗಳಲ್ಲಿ ನೆರೆದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರಿಂದ ಅಲ್ಲಲ್ಲಿ ನೂಕುನುಗ್ಗಲು ಉಂಟಾಯಿತು. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಸಂದರ್ಭದಲ್ಲಿ ಪ್ರಮುಖ ದೇವಾಲಯಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.