ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿರುವ ಶ್ರೀಮಂಟೇಸ್ವಾಮಿ ದೇವಸ್ಥಾನದ ಮುಂಭಾಗ ಬುಧವಾರ ಭೀಮ ಕೋರೆಗಾಂವ್ ಯುದ್ಧದ 202ನೇ ವರ್ಷದ ವಿಜಯೋತ್ಸವವನ್ನು ಆಚರಿಸಲಾಯಿತು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, 30 ಸಾವಿರ ಪೇಶ್ವೆ ಸೈನಿಕರನ್ನು ಕೇವಲ 500 ಮಹರ್ ಸೈನಿಕರು ಸೇರಿಕೊಂಡು ಸೋಲಿಸಿದ ಕದನವನ್ನು ಕೋರೆಗಾಂವ್ ವಿಜಯೋತ್ಸವನ್ನಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪಶ್ಯತೆ, ಮೇಲು-ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟವಾಗಿದೆ. ಈ ಯುದ್ಧ ಮಹಾರಾಷ್ಟ್ರದ ಭೀಮಾತೀರದಲ್ಲಿ ನಡೆದ್ದರಿಂದ ಇದು ಇತಿಹಾಸದಲ್ಲಿ ಭೀಮಾ ಕೋರೆಗಾಂವ್ ಕದನ ಎಂದು ಪ್ರಸಿದ್ಧಿ ಪಡೆದಿದೆ ಎಂದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಕೋರೆಗಾಂವ್ ಯುದ್ಧದಲ್ಲಿ 500 ಮಹರ್ ಸೈನಿಕರ ಪೈಕಿ 22 ಸೈನಿಕರು ಮರಣ ಹೊಂದುತ್ತಾರೆ. ಅವರ ನೆನಪಿಗಾಗಿ ಭೀಮನದಿ ತೀರದಲ್ಲಿ ವಿಜಯಸ್ಥಂಭ ಸ್ಥಾಪಿಸಲಾಗಿದೆ. ದಲಿತ ಸ್ವಾಭಿಮಾನವಾದ ಕೋರೆಗಾಂವ್ ಯುದ್ಧದ ಅರಿವು ಮೂಡಿಸಲು ಪ್ರತಿ ಜ.1ಅನ್ನು ಕೋರೆಗಾಂವ್ ವಿಜಯೋತ್ಸವವಾಗಿ ಆಚರಿಸಲಾಗುತ್ತಿದೆ ಎಂದರು.
ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಮಾತನಾಡಿ, ವೀರಯೋಧರಾದ ಮಹರ್ ಸೈನಿಕರ ಕೋರೆಗಾಂವ್ ಯುದ್ಧ ಗೆಲುವನ್ನು ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದರು.
ನಂತರ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಭೀಮರಾವ್ ಹೆಬ್ಬಾಗಿಲು ಬಳಿ ಪಟಾಕಿ ಸಿಡಿಸಿ ಅಲ್ಲಿಂದ ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಮುಖಂಡರಾದ ಆಲೂರು ನಾಗೇಂದ್ರ, ರಾಮಸಮುದ್ರ ಸುರೇಶ್, ಎಂ.ಉಮೇಶ್, ಉಮೇಶ್, ಬಂಗಾರಸ್ವಾಮಿ, ಮಹದೇವಯ್ಯ, ನಾರಾಯಣಸ್ವಾಮಿ, ಕೊಡೆಸೋಗೆ ಪ್ರಸಾದ್ ಇತರರಿದ್ದರು.