ಬಾಗಲಕೋಟೆ: ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ವಾಪಸ್ ಊರಿಗೆ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ.
ಗದಗ ಜಿಲ್ಲೆ ರೋಣ ತಾಲೂಕಿನ ಡಸ ಹಡಗಲಿ ಗ್ರಾಮದ ಬಸನಗೌಡ ಪಾಟೀಲ (60), ಸಂಗಮ್ಮ ಪಾಟೀಲ (55) ಹಾಗೂ ಕಾರು ಚಾಲಕ ಮಂಜುನಾಥ ಮಾರನಬಸರಿ (38) ಸಾವನ್ನಪ್ಪಿರುವ ದುರ್ದೈವಿಗಳು. ಸೋಮವಾರ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ಬಸನಗೌಡ ಅವರ ಸಂಬಂಧಿಕರು ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಗೆ ಬಂದಿದ್ದರು. ಅಂತ್ಯಕ್ರಿಯೆ ಮುಗಿಸಿ ರಾತ್ರಿ ಊರಿಗೆ ಹೋಗುತ್ತಿದ್ದಾಗ ರೋಣ ಕಡೆಯಿಂದ ವೇಗವಾಗಿ ಬಂದ ಅಪರಿಚಿತ ವಾಹನ ಕಾರಿಗೆ ಡಿಕ್ಕಿ ಹೊಡೆದಿದ್ದು, ವಾಹನ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸವನಗೌಡ ಹಾಗೂ ಚಾಲಕ ಮಂಜುನಾಥ ಸ್ಥಳದಲ್ಲೇ ಮೃತರಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಗಂಗಮ್ಮ ಅವರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಶರಣಪ್ಪಗೌಡ ಹಾಗೂ ಕಮಲಾಕ್ಷಿ ಎನ್ನುವವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಧಾರವಾಡ ಎಸ್ಡಿಎಂಸಿಗೆ ದಾಖಲಿಸಲಾಗಿದೆ. ಬಾದಾಮಿ ಪೊಲೀಸರು ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿದ್ದಾರೆ.