ಚಾಮರಾಜನಗರ: ನಗರದ ಸೋಮವಾರಪೇಟೆ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಅಪ್ರಾಪ್ತ ಬಾಲಕರು ಬೈಕ್‌ನಲ್ಲಿ ರಸ್ತೆ ದಾಟುವಾಗ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟರೆ ಐವರ ಸ್ಥಿತಿ ಗಂಭೀರವಾಗಿದೆ.
ನಗರದ ಗಾಳೀಪುರ ಬಡಾವಣೆಯ ನಿವಾಸಿ ಮಿರಾನ್(13) ಮೃತ ದುರ್ದೈವಿ. ಈತನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ೈಜಲ್(11), ಅದ್ನಾನ್ ಪಾಷಾ (13) ಮತ್ತು ರಯಾನ್ (11) ತೀವ್ರವಾಗಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭಿರವಾಗಿದೆ. ಈ ನಾಲ್ವರು ಬಾಲಕರು ದ್ವಿಚಕ್ರ ವಾಹನದಲ್ಲಿ ಸೋಮವಾರಪೇಟೆ ಸಮೀಪದಲ್ಲಿರುವ ಬೈಪಾಸ್ ತಿರುವಿನಲ್ಲಿ ರಸ್ತೆದಾಟುವಾಗ ಲಾರಿಯೊಂದು ಎದುರುಗೆ ಬಂದು ಡಿಕ್ಕಿಯೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೆ ಮೂವರಿಗೆ ತೀವ್ರವಾದ ಪೆಟ್ಟಾಗಿತ್ತು. ಅಪಘಾತದಲ್ಲಿ ದ್ವಿಚಕ್ರ ವಾಹನವಲ್ಲದೇ ಒಂದು ಕಾರು ಕೂಡ ಡಿಕ್ಕಿ ಹೊಡೆದಿದ್ದು, ಕಾರಿನ ಚಾಲಕ ಶ್ರೀಕಾಂತ್ ಮತ್ತು ಕೆನಾಂತ್ ಎಂಬುವವರಿಗೂ ತೀವ್ರವಾದ ಗಾಯವಾಗಿದೆ.
ಈ ವೇಳೆ ವಿಷಯ ತಿಳಿಯುತ್ತಿದ್ದಂತೆ ಅಪಘಾತದ ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಧಾವಿಸಿ ಮೃತದೇಹ ಹಾಗೂ ಗಾಯಾಳುಗಳನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಈ ಸಂದರ್ಭದಲ್ಲಿ ಇಬ್ಬರು ಬಾಲಕರ ಸ್ಥಿತಿ ತೀವ್ರ ಗಂಭೀರವಾದ ಹಿನ್ನೆಲೆಯಲ್ಲಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಸಿಮ್ಸ್ ಆಸ್ಪತ್ರೆ ಮತ್ತು ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಅಪರ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್ಪಿ ಲಕ್ಷ್ಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಮ್ಸ್‌ಗೆ ಶಾಸಕರ ಭೇಟಿ:
ನಗರದ ಸೋಮವಾರಪೇಟೆ ಬಳಿ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಮೊದಲಿಗೆ ಗಾಯಾಳುಗಳನ್ನು ಭೇಟಿ ಮಾಡಿ, ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಬಳಿಕ ಶವಾಗಾರಕ್ಕೆ ತೆರಳಿ ಮೃತ ಮಿರಾನ್ ಮೃತದೇಹವನ್ನು ವೀಕ್ಷಿಸಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.