ಜಿಲ್ಲೆ

ಭೀಕರ ಅಪಘಾತ ಮೃತರ ಕುಟುಂಬಕ್ಕೆ ಸಚಿವ ತಿಮ್ಮಾಪೂರ ಸಾಂತ್ವನ

ಬಾಗಲಕೋಟೆ: ಶಾಲಾ ವಾಹನ ಅಪಘಾತಕ್ಕೀಡಾಗಿ ಕವಟಗಿ ಗ್ರಾಮದ ೪ ಜನ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೃತರ ಕುಟುಂಬಸ್ಥರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿ, ದೌರ್ಯ ತುಂಬುವ ಕೆಲಸ ಮಾಡಿದರು.

ಜಮಖಂಡಿ ತಾಲೂಕಿನ ಆಲಗೂರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಂಭವಿಸಿ ೪ ಜನ ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ಮನಸ್ಸಿಗೆ ತೀವ್ರ ಆಘಾತ ತಂದಿದೆ. ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಆತ್ಮಕ್ಕೆ ಭಗವಂತ ಶಾಂತಿ ನೀಡಲೇಂದು ಪ್ರಾರ್ಥಿಸುವುದಾಗಿ ತಿಳಿಸಿದ ಅವರು ಜಮಖಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಹ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ೨ ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತಲಾ ೫೦ ಸಾವಿರ ರೂ.ಗಳ ಪರಿಹಾರ ನೀಡಲಾಗುವುದೆಂದು ತಿಳಿಸಿದರು. ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸೇರಿದಂತೆ ಇತರೇ ಅಧಿಕಾರಿಗಳು ಇದ್ದರು.