ಜಿಲ್ಲೆ

ಭಿನ್ನಾಭಿಪ್ರಾಯ ವರಿಷ್ಠರು ಸರಿ ಮಾಡುತ್ತಾರೆ: ಶ್ರೀರಾಮುಲು

ಮೈಸೂರು: ಬಿಜೆಪಿಯಲ್ಲಿ ಯಾವುದೇ ಬಂಡಾಯವಿಲ್ಲ. ಪಾರ್ಟಿ ವಿಚಾರ ಬಂದಾಗ ನಾವೆಲ್ಲರೂ ಒಂದೇ. ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಅದನ್ನು ಸರಿಪಡಿಸುವ ಕೆಲಸವನ್ನು ವರಿಷ್ಠರು ಮಾಡಲಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಕೂಡ ನಮ್ಮ ಪಕ್ಷದ ಹಿರಿಯ ನಾಯಕರು. ಭಿನ್ನಾಭಿಪ್ರಾಯಗಳನ್ನು ರಾಷ್ಟ್ರೀಯ ನಾಯಕರು ಸರಿ ಮಾಡುತ್ತಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಅವರು, ಯಾರಿಗೆ ಯಾವ ಸ್ಥಾನಮಾನ ಸಿಗಬೇಕೋ ಸಿಗುತ್ತದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡುತ್ತಾಳೆ. ಈ ಬಗ್ಗೆ ಏನು ಹೇಳಬೇಕೋ ಅದೆಲ್ಲವನ್ನೂ ಹೇಳಿದ್ದೀನಿ. ಹಳೆಯ ವಿಚಾರದ ಬಗ್ಗೆ ಮತ್ತೆ ಮಾತನಾಡೋದಿಲ್ಲ ಎಂದು ಹೇಳಿದರು.

ದೆಹಲಿ ಸಿಎಂ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ತೆರವು ಕುರಿತು ಪ್ರತಿಕ್ರಿಯಿಸಿದ ಅವರು, ಡಾ.ಅಂಬೇಡ್ಕರ್ ಭಾವಚಿತ್ರ ತೆರವು ಮಾಡುವಂತಹ ಶಕ್ತಿ ಯಾರಿಗೂ ಇಲ್ಲ. ನಮಗೆ ರಾಮಾಯಣ, ಮಹಾಭಾರತ ಗ್ರಂಥದಷ್ಟೇ ಸಂವಿಧಾನಕ್ಕೂ ಅಷ್ಟೇ ಗೌರವ ಇದೆ ಎಂದರು.

ಮೈಸೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ 10 ವರ್ಷವಾದರೂ ಪೂರ್ಣಗೊಂಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಹಣವನ್ನು ಕಾಂಗ್ರೆಸ್ ಸರ್ಕಾರ ಎರಡು ವರ್ಷವಾದರೂ ಬಿಡುಗಡೆ ಮಾಡಿಲ್ಲ. ಇವರಿಗೆಲ್ಲ ಅಂಬೇಡ್ಕರ್ ಕುರಿತು ಮಾತನಾಡಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.