ಜಿಲ್ಲೆ

ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿ

ಮೈಸೂರು: ಯುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಹೇಳಿದರು.

ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಇಂದಿರಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಜಯ ಗಳಿಸಿದ ಜಿಲ್ಲಾ, ತಾಲೂಕು ಹಾಗೂ ವಿಧಾನಸಭಾ ಪದಾಧಿಕಾರಿಗಳ ಪ್ರಥಮ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವ ಕಾಂಗ್ರೆಸ್ ಚುನಾವಣೆ ನಡೆದಿರುವುದು ಬಿಜೆಪಿ ಅಥವಾ ಜೆಡಿಎಸ್ ವಿರುದ್ಧವಲ್ಲ. ಗೆದ್ದಿರುವುದು ನಮ್ಮದೇ ಪಕ್ಷದ ಕಾರ್ಯಕರ್ತರ ನಡುವೆ. ಆದ್ದರಿಂದ ಭಿನ್ನಾಭಿಪ್ರಾಯಗಳು ಇದ್ದರೆ ಅದನ್ನು ಬಿಟ್ಟು ಪಕ್ಷ ಸಂಘಟನೆಯತ್ತ ತೊಡಗಿಸಿಕೊಳ್ಳಬೇಕು ಎಂದರು.

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ. ಪಕ್ಷದ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪಕ್ಷದ ಜವಾಬ್ದಾರಿ ಸಾಕಷ್ಟಿದೆ. ತಾಲೂಕು ಪದಾಧಿಕಾರಿಗಳು ಮೊದಲು ತಾಲೂಕು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ನ ಸಿದ್ಧಾಂತಕ್ಕೆ ಧಕ್ಕೆಯಾದಾಗ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಿಡಿದೇಳಬೇಕು ಎಂದರು.

ಪಕ್ಷ ನಗರಾಧ್ಯಕ್ಷ ಆರ್.ಮೂರ್ತಿ ಮಾತನಾಡಿ, ಬಿಜೆಪಿ ಸೃಷ್ಟಿ ಮಾಡುತ್ತಿರುವ ಕೋಮುಗಲಭೆ ಹಾಗೂ ಹಸಿ ಸುಳ್ಳುಗಳಿಂದ ದೇಶಕ್ಕೆ ಹಿನ್ನಡೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ನಡೆದ ಕುಂಭಮೇಳಕ್ಕೆ ರಾಜಕೀಯ ಲೇಪನ ಮಾಡಿ ಸುಳ್ಳು ಸುದ್ದಿಗಳನ್ನು ಬಿಜೆಪಿಯವರು ಬಿತ್ತರಿಸುತ್ತಿದ್ದಾರೆ. ಇದರ ವಿರುದ್ಧ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹೋರಾಟ ನಡೆಸಬೇಕು ಎಂದರು.

ಕೆಪಿಸಿಸಿ ವಕ್ತರ ಎಂ.ಲಕ್ಷ್ಮಣ್ ಮಾತನಾಡಿ, ಉದಯಗಿರಿ ಗಲಾಟೆಯನ್ನು ಬಿಜೆಪಿ ತನ್ನ ಸ್ವಾರ್ಥ ಸಾಧನೆಗೆ ಬಳಸಿಕೊಂಡಿದೆ. ದೇಶದಲ್ಲಿ ಬಿಜೆಪಿಯನ್ನು ಬುಡಸಮೇತ ಕಿತ್ತುಹಾಕುವವರೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ವಿಶ್ರಮಿಸಬಾರದು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಎಂ.ಗುಡ್ಡಪ್ಪ, ಎಂ.ಶಿವಣ್ಣ, ಶಿವಪ್ರಸಾದ್, ಡಿ.ಈಶ್ವರ್ ಚಕ್ಕಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದನ್ ಕುಮಾರ್, ನಗರ ಅಧ್ಯಕ್ಷ ಅಬ್ರಾರ್, ಕೆಪಿಸಿಸಿ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ದೀಪಕ್ ಶಿವಣ್ಣ, ನಜ್ಮಾನ್ ನಜೀರ್, ಅಬ್ರಾರ್ ಅಹಮದ್, ಜಿಲ್ಲಾ ಸೇವಾದಳದ ಅಧ್ಯಕ್ಷ ಸಾ.ಮಾ ಯೋಗೇಶ್, ಎಸ್‌ಸಿ ಘಟಕದ ನಗರಾಧ್ಯಕ್ಷ ರಮೇಶ್, ಒಬಿಸಿ ನಗರಾಧ್ಯಕ್ಷ ಎನ್.ಆರ್.ನಾಗೇಶ್, ನಗರ ಸೇವಾದಳದ ಅಧ್ಯಕ್ಷ ಎಂ.ಕೆ.ಅಶೋಕ್ ಇತರರು ಇದ್ದರು.