ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಆಯೋಜಿಸಲಾದ ಕಾಂಗ್ರೆಸ್ ಪಕ್ಷದ ಸಭೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಮಾಜಿ ಸಚಿವ ವೀರಕುಮಾರ ಪಾಟೀಲ, ಕಾಕಾಸಾಹೇಬ ಪಾಟೀಲ, ಲಕ್ಷ್ಮಣರಾವ ಚಿಂಗಳೆ, ಅಣ್ಣಾಸಾಹೇಬ ಇತರರಿದ್ದಾರೆ. 
ಜಿಲ್ಲೆ

ಭಿನ್ನಾಭಿಪ್ರಾಯ ಬದಿಗಿಟ್ಟು ಕಾರ್ಯನಿರ್ವಹಿಸಿ

ಮಾಂಜರಿ, ಬೆಳಗಾವಿ: ಯಾರು ಪಕ್ಷದ ಪರವಾಗಿ ದುಡಿಯುತ್ತಾರೋ ಅಂತಹವರನ್ನು ಬೆಳೆಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಿಪ್ಪಾಣಿ ಮತಕ್ಷೇತ್ರದ ಬೇಡಿಕಿಹಾಳದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಸಮಸ್ಯೆ ಬಂದಾಗ ಮಂದಿರ, ಮಸೀದಿ ಜಗಳ ತರುತ್ತಾರೆ. ಮಂದಿರ, ಮಸೀದಿ ನಮ್ಮ ಸಮಸ್ಯೆ ಅಲ್ಲ. ರೈತರಿಗೆ ಸರಿಯಾಗಿ ಗೊಬ್ಬರ ಸಿಗಬೇಕು.

ಈ ಬಗ್ಗೆ ಮಾತನಾಡಲು ನಮ್ಮ ಮಾಧ್ಯಮಗಳಿಗೆ ಸಮಯ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಎಸ್‌ಸಿ, ಎಸ್‌ಟಿ ಸಮುದಾಯದ ಸಾಕಷ್ಟು ಕಾರ್ಯಕ್ರಮಗಳನ್ನು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿಲ್ಲಿಸಿದೆ. ಇದನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ, ಅವರ ಪರವಾಗಿ ಭಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪಕ್ಷದಿಂದ ಗೆಲ್ಲುವ ಅಭ್ಯರ್ಥಿ ಹುಡುಕುತ್ತೇವೆ. ಯಾರಿಗೆ ಶಕ್ತಿ ಇದೆ ಎಂಬುದನ್ನು ನೋಡಿ ಟಿಕೆಟ್ ಕೊಡಲಾಗುವುದು. ಎಲ್ಲ ಕಾರ್ಯಕರ್ತರ ಜತೆ ಚರ್ಚಿಸಿ ಹೈಕಮಾಂಡ್‌ಗೆ ತಿಳಿಸುತ್ತೇವೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಎಂದು ಅಭಿಯಾನವನ್ನು ಈಗಾಗಲೇ ಶುರು ಮಾಡಿದ್ದೇವೆ ಎಂದರು. ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಇತರರಿದ್ದರು.