ಶಿವಕುಮಾರ ಶಶಿಮಠ ಗಜೇಂದ್ರಗಡ
ದಕ್ಷಿಣ ಕಾಶಿ ಕಾಲಕಾಲೇಶ್ವರನ ಸನ್ನಿಧಿಯಲ್ಲಿ ಭಿಕ್ಷುಕರ ಹಾವಳಿ ಹೆಚ್ಚಿದೆ. ಹಾಗೆ ನೋಡಿದರೆ ಅವರ್ಯಾರೂ ನಿರ್ಗತಿಕರು, ನಿಸ್ಸಹಾಯಕರು ಅಲ್ಲ. ಬದಲಾಗಿ ಮುಗ್ಧ ಮಕ್ಕಳನ್ನು ಬಳಸಿಕೊಂಡು ಅಕ್ರಮವಾಗಿ ದಂಧೆ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರಲ್ಲಿ ಬೇಸರ ಉಂಟು ಮಾಡಿದೆ.
ಕೆಲ ಮಹಿಳೆಯರು ಬಡ ಹಾಗೂ ಅನಾಥ ಮಕ್ಕಳನ್ನು ಪಡೆದು, ಅವರಿಗೆ ನಿದ್ರೆ ಮಾತ್ರೆ ಅಥವಾ ಮಂಪರಿನ ಚುಚ್ಚು ಮದ್ದು ಕೊಟ್ಟು ಭಿಕ್ಷೆ ಬೇಡುತ್ತಾರೆ. ಕೆಲವು ಮಕ್ಕಳ ಮೇಲೆ ಒತ್ತಡ ಹಾಕಿ ಒತ್ತಾಯಪೂರ್ವಕವಾಗಿ ಭಿಕ್ಷಾಟನೆಗೆ ದೂಡಿರುವುದು ಕಂಡುಬರುತ್ತಿದೆ. ಪಟ್ಟಣದ ಬಸ್ ನಿಲ್ದಾಣ, ಕಾಲಕಾಲೇಶ್ವರ ವೃತ್ತ, ಕಾಲಕಾಲೇಶ್ವರ ದೇವಸ್ಥಾನದಲ್ಲಿ ಇಂತಹ ಭಿಕ್ಷಾಟನೆೆ ಜೋರಾಗಿದೆ. ಬೇರೆ ಜಿಲ್ಲೆಗಳಿಂದ ಬಂದು ಭಿಕ್ಷೆ ಬೇಡುವ ಮಕ್ಕಳ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಬಹುತೇಕ ಪ್ರಯಾಣಿಕರು ಹಾಗೂ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಈ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಶ್ರಾವಣ ಮಾಸದ ಪ್ರಯುಕ್ತ ಪಟ್ಟಣದ ಸಮೀಪದ ಕಾಲಕಾಲೇಶ್ವರಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ದೇವಸ್ಥಾನದ ಮೆಟ್ಟಿಲುಗಳ ಮೇಳೆ ಮಕ್ಕಳನ್ನು ಕೂಡಿಸಿ ಭಿಕ್ಷಾಟನೆ ಮಾಡಿಸುತ್ತಾರೆ. ಕೆಲವರಂತೂ ಭಿಕ್ಷೆ ಕೊಡುವವರೆಗೂ ಅವರನ್ನು ಮುಂದೆ ಹೋಗದಂತೆ ತಡೆಯುತ್ತಾರೆ. ತಾವರಗೆರೆ, ಹೊಸಪೇಟೆ, ಕುಷ್ಟಗಿ, ಇಲಕಲ್ಲ, ಕೊಪ್ಪಳ ಸೇರಿದಂತೆ ಜಿಲ್ಲೆಗಳಿಂದ ಮಹಿಳೆಯರು ಹಾಗೂ ಮಕ್ಕಳು ಭಿಕ್ಷೆ ಬೇಡಲು ಬರುತ್ತಾರೆ. ವಾರಗಳನ್ನು ಹಂಚಿಕೊಂಡಿರುವ ಭಿಕ್ಷುಕರು ಒಂದು ವಾರ ಒಂದು ಊರಿನವರು ಗಜೇಂದ್ರಗಡದಲ್ಲಿ ಭಿಕ್ಷೆ ಬೇಡಿದರೆ ಮತ್ತೊಂದು ವಾರ ಬೇರೆ ಗುಂಪು ಬಂದು ಇಲ್ಲಿ ಭಿಕ್ಷೆ ಬೇಡುತ್ತದೆ. ಈ ಬಗ್ಗೆ ಸಾರ್ವಜನಿಕರು ಮಕ್ಕಳ ಸಹಾಯವಾಣಿ 1098ಗೆ ಹಲವಾರು ಬಾರಿ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಇಲಾಖೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಮಕ್ಕಳ ರಕ್ಷಣೆಯಾಗುತ್ತಿಲ್ಲ. ಭಿಕ್ಷಾಟನೆಯಿಂದ ಸಾರ್ವಜನಿಕರಿಗೆ ಕಿರಿಕರಿ ಮಾತ್ರ ತಪ್ಪುತ್ತಿಲ್ಲ ಎನ್ನುತ್ತಾರೆ ಪಟ್ಟಣದ ವ್ಯಾಪಾರಿ ಪರಶುರಾಮ ಹಾಳಕೇರಿ.
ಹಸುಗೂಸುಗಳಿಗೆ ಹಿಂಸೆ: ಭಿಕ್ಷೆ ಬೇಡುವ ಕೆಲ ಮಹಿಳೆಯರು ಹಸುಗೂಸುಗಳನ್ನು ಕಂಕುಳಲ್ಲಿ ಕಟ್ಟಿಕೊಂಡು ಮಳೆ, ಚಳಿ, ಬಿಸಿಲು ಎನ್ನದೆ ಓಡಾಡುತ್ತಾರೆ. ಮಗುವಿನ ಹೆಸರು ಹೇಳಿ ಜನರನ್ನು ಕಾಡಿ ಬೇಡಿ ಹಣ ಪಡೆಯುತ್ತಾರೆ. ಆದರೆ, ಅದೆಷ್ಟೇ ಹೊತ್ತಾದರೂ ಮಗು ಮಾತ್ರ ಮಿಸುಕಾಡುವುದಿಲ್ಲ. ಇದನ್ನು ಗಮನಿಸಿದರೆ ಹಸುಗೂಸುಗಳಿಗೆ ನಿದ್ರೆ ಮಾತ್ರೆಯೋ ಅಥವಾ ಮತ್ತು ಬರಿಸುವ ಔಷಧ ನೀಡಿರುವುದು ಕಂಡುಬರುತ್ತಿದೆ. ಅಲ್ಲದೆ, ಕೆಲವು ಮಹಿಳೆಯರು ಭಿಕ್ಷೆ ಬೇಡುವಾಗ ಮಗುವಿಗೆ ಹಸಿವೆಯಾಗಿ ಅದೆಷ್ಟೇ ಗೋಗರೆದರೂ ಸಂಪೂರ್ಣ ನಿರ್ಲಕ್ಷ್ಯಹಿಸಿ ಭಿಕ್ಷೆ ಬೇಡುವುದರಲ್ಲಿ ಮಗ್ನರಾಗಿರುತ್ತಾರೆ.
ಸಕ್ರಿಯವಾಗಿದೆ ಬೃಹತ್ ಜಾಲ: ಗಜೇಂದ್ರಗಡ ಪಟ್ಟಣಕ್ಕೆ ಸರಿಯಾಗಿ 6 ಗಂಟೆಗೆ ಭಿಕ್ಷುಕರು ಬರುತ್ತಾರೆ. 8ರಿಂದ 15 ವಯೋಮಾನದ ಒಳಗಿನ 10-12 ಮಕ್ಕಳು ಈ ಗುಂಪಿನಲ್ಲಿ ಇರುತ್ತಾರೆ. ತಂಡಕ್ಕೆ ಒಬ್ಬ ಪೋಷಕರಿದ್ದು ಅವರೇ ಎಲ್ಲರನ್ನು ನಿಭಾಯಿಸುತ್ತಾರೆ. ಸಂಜೆ 6 ಗಂಟೆ ಸುಮಾರಿಗೆ ಬಂದು ಎಲ್ಲರಿಂದಲೂ ಹಣ ಪಡೆದು ಎಣಿಸಿಕೊಂಡು ಕರೆದುಕೊಂಡು ಹೋಗುತ್ತಾರೆ. ಮರುದಿನ ಈ ಗುಂಪು ಮತ್ತೊಂದು ಊರಿಗೆ ಭಿಕ್ಷೆ ಬೇಡಲು ಹೋಗುತ್ತದೆ.
ಗಜೇಂದ್ರಗಡ ತಾಲೂಕಿನಲ್ಲಿ ಮಕ್ಕಳು ಭಿಕ್ಷಾಟನೆ ಮಾಡುವುದು ನನ್ನ ಗಮನಕ್ಕೆ ಬಂದಿಲ್ಲ. ಗದಗ ತಾಲೂಕಿನಲ್ಲಿ ಕಳೆದ ವರ್ಷ ಭಿಕ್ಷಾಟನೆ ಮಾಡುತ್ತಿರುವ ಮಕ್ಕಳನ್ನು ರಕ್ಷಣೆ ಮಾಡಿದ್ದೇವೆ. ಶೀಘ್ರವೇ ತಂಡ ರಚಿಸಿ ಮಕ್ಕಳನ್ನು ರಕ್ಷಿಸಲು ಕ್ರಮ ಕೈಗೊಳ್ಳುತ್ತೇನೆ. | ಎಚ್.ಎಸ್. ಜೋಗೇರ, ಜಿಲ್ಲಾ ಪ್ರಭಾರ ಮಕ್ಕಳ ರಕ್ಷಣಾಧಿಕಾರಿ, ಗದಗ