ಚಿಕ್ಕಮಗಳೂರು: ಸಾವಿರಾರು ವರ್ಷ ಇತಿಹಾಸ ಇರುವ ಸಾಂಪ್ರಾದಾಯಿಕ ಸಮೃದ್ಧ ಭಾಷೆಯಾದ ಕನ್ನಡವನ್ನು ಮನೆಗಳಲ್ಲಿ ಬಳಕೆ ಮಾಡಿ, ದಿನನಿತ್ಯದ ಜೀವನದಲ್ಲಿ ಉಪಯೋಗಿಸಿ, ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಯುವಜನರ ಮೇಲಿದೆ ಎಂದು ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಮಾಜಿ ಸದಸ್ಯ ಬಿಸಿಲೇಹಳ್ಳಿ ಸೋಮಶೇಖರ್ ತಿಳಿಸಿದರು.
ನಗರದ ಉಪ್ಪಳ್ಳಿಯ ಮಾಡೆಲ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಅರಸರು ಕನ್ನಡ ಭಾಷೆ ಉಳಿವು ಮತ್ತು ಬೆಳವಣಿಗೆಗಾಗಿ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಜಾನಪದ, ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಸಾಗಿ ಬಂದ ವಿಧವನ್ನು ವಿವರಿಸಿ ಹೇಗೆ ನಾಟಕ ಕಲೆಯು ನಮ್ಮ ಲಲಿತಾ ಕಲೆಗಳನ್ನು ಉಳಿಸುವ ದಿಕ್ಕಿನಲ್ಲಿ ಪರಿಣಾಮಕಾರಿಯಾಗಿ ಉಪಯೋಗವಾಗುತ್ತದೆ ಎಂದು ವಿವರಿಸಿದರು.
ಶಾಲಾ ಸಂಸ್ಥಾಪಕ ಎಂ.ಎನ್.ಷಡಕ್ಷರಿ ಮಾತನಾಡಿ, ಒಂದು ದೇಶದ ನಾಗರೀಕತೆ ಅಥವಾ ಸಂಸ್ಕೃತಿಯನ್ನು ಹಾಳುಮಾಡುವುದಾದರೆ ಅದು ಅಲ್ಲಿನ ಭಾಷೆ, ಶಿಕ್ಷಣ ಮತ್ತು ಆಹಾರ ಪದ್ಧತಿಯಿಂದ ಸಾಧ್ಯವಿದೆ. ಇಷ್ಟೆಲ್ಲಾ ತೊಡಕುಗಳ ನಡುವೆಯೂ ನಮ್ಮ ಕನ್ನಡ ಭಾಷೆ ಉಳಿದು ಬೆಳೆಯುತ್ತಾ ಬಂದಿದೆ. ಅದನ್ನು ಇನ್ನೂ ಸಮೃದ್ಧವಾಗಿ ಮಾಡಬೇಕಾದುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಭಾಷೆಯನ್ನು ಉಳಿಸಬೇಕಾದರೆ ಸಾಹಿತ್ಯಾಭ್ಯಾಸ ಅಗತ್ಯ. ಎಳೆಯ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕು. ಅಲ್ಲದೆ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿ ನಡೆದರೆ ಅದು ಅವರನ್ನು ಸದೃಡವನ್ನಾಗಿಸುತ್ತದೆ ಹಾಗೂ ಕನ್ನಡ ಸಾಹಿತ್ಯದ ಅಧ್ಯಯನದಿಂದ ಮಾತ್ರವೇ ಕನ್ನಡವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳು ಹಿಂಜರಿಕೆಯಿAದ ತಮ್ಮ ಪ್ರತಿಭೆಯನ್ನು ಹೊರಸೂಸದೆ ಮೌನವಾಗುತ್ತಾರೆ. ಅದನ್ನು ತೊರೆದು ಛಲದಿಂದ ಶ್ರಮವಹಿಸಿದರೆ ಯಾವುದೇ ರೀತಿಯ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಮಾತೃಭಾಷೆಯ ಮೂಲಕ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಅದಕ್ಕೆ ಅನೇಕ ದಿಗ್ಗಜರು ಸಾಕ್ಷಿಯಾಗಿದ್ದಾರೆ. ಹಾಗಾಗಿ ಮಾತೃಭಾಷೆ ಮೇಲೆ ಅಭಿಮಾನವಿರಲಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥಾಪಕಿ ವಿಶಾಲಾ ಷಡಕ್ಷರಿ, ಮುಖ್ಯ ಶಿಕ್ಷಕ ಯೋಗೀಶ್, ಪ್ರಮುಖರಾದ ದಿವ್ಯಾ, ಮಂಜುಳಾ, ಜಯಂತಿ ಮತ್ತಿತರರಿದ್ದರು.