ಗಂಡಸಿ: ಕನ್ನಡ ನಾಡಿನಲ್ಲಿ ಮಾತೃ ಭಾಷೆಯ ಉಳಿವಿಗಾಗಿ ಸಂಘಟನೆಗಳು ಹೋರಾಟ ನಡೆಸುತ್ತಿರುವುದು ನೋವಿನ ಸಂಗತಿ ಎಂದು ಗಂಡಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ತಿಳಿಸಿದರು.
ಗಂಡಸಿ ಶ್ರೀ ಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಆಂಗ್ಲ ಮಾಧ್ಯಮ ಶಾಲೆಗಳ ವತಿಯಿಂದ ವಿದ್ಯಾಸಂಸ್ಥೆಯ ಎವಿಎಸ್ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆಯ ಬೆಳವಣಿಗೆ ದಿನೇ ದಿನೆ ಕುಂಠಿತವಾಗುತ್ತಿದ್ದು ಉಳಿವಿಗಾಗಿ ಹೋರಾಟಗಳು ಚಳವಳಿಗಳು ನಡೆಯುತ್ತಲೇ ಇವೆ. ಅಭಿಮಾನಶೂನ್ಯರಾದ ಬಹುಪಾಲು ಕನ್ನಡಿಗರು ನೋಡುತ್ತಾ ಕೈಚೆಲ್ಲಿ ಕುಳಿತಿರುವುದು ವಿಪರ್ಯಾಸದ ಸಂಗತಿ. ಅನ್ಯ ಭಾಷೆಗಳ ವ್ಯಾಮೋಹ, ಜಾಗತೀಕರಣದಂತಹ ಹಲವು ಸವಾಲುಗಳನ್ನು ಎದುರಿಸುವುದರೊಂದಿಗೆ ಕನ್ನಡ ಭಾಷೆ ನಲುಗುತ್ತಿದೆ ಎಂದರು.
ಶ್ರೀ ಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಜಿ.ಎನ್.ದ್ಯಾವೇಗೌಡ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಮಮತಾ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ, ಉಪನ್ಯಾಸಕರಾದ ಪಲ್ಲವಿ, ಅರ್ಚನಾ, ವೀಣಾ, ಶಿಕ್ಷಕರಾದ ತೇಜಮೂರ್ತಿ, ಹನುಮಂತಪ್ಪ, ಸಿಬ್ಬಂದಿ ಹಾಜರಿದ್ದರು.