ನಾಪೋಕ್ಲು: ಭಾಷೆ ಉಳಿದರೆ ಮಾತ್ರ ನಮ್ಮ ಆಚಾರ ವಿಚಾರ ಸಂಸ್ಕೃತಿ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಜನಾಂಗದ ಹಿರಿಯರು ಪಾಲಿಸಿಕೊಂಡು ಬಂದ ತಮ್ಮ ಪದ್ಧತಿ-ಪರಂಪರೆಗಳನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹೇಳಿದರು.
ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಗೌಡ ಯುವ ವೇದಿಕೆ ಮಡಿಕೇರಿ ಹಾಗೂ ನರಿಯಂದಡ ಅಯ್ಯಪ್ಪ ಯುವಕ ಸಂಘದ ಸಹಯೋಗದಲ್ಲಿ ಭಾನುವಾರ ಪಾರಾಣೆ ಗೌಡ ಸಮಾಜದಲ್ಲಿ ಏರ್ಪಡಿಸಿದ್ದ ಆಟಿ ಜಂಬರ 2023 ರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನಿಂದಲೂ ನಡೆದು ಬಂದ ಪದ್ಧತಿ, ಪರಂಪರೆಗಳನ್ನು ಮರೆಯಬಾರದು. ಜಿಲ್ಲೆಯ ಪರಿಸರ ಉತ್ತಮವಾಗಿದ್ದು, ಸಮಾಜದ ಬಾಂಧವರು ತಮ್ಮ ಭೂಮಿಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕೆಂದರು.
ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಜಿಲ್ಲೆಯಲ್ಲಿ ಹುಟ್ಟಿದವರು ಪುಣ್ಯವಂತರು. ಇಂದಿನ ಜನಾಂಗ ಆಚರಿಸುತ್ತಿರುವ ಕಾರ್ಯಕ್ರಮಗಳು ಕಳೆದುಹೋದ ಸಂಪ್ರದಾಯವನ್ನು ನೆನಪಿಸುತ್ತಿವೆ. ಇಂದಿನ ದಿನಗಳಲ್ಲಿ ಸ್ವಾರ್ಥ ಮೆರೆಯುತ್ತಿದ್ದು, ಸಾಮೂಹಿಕವಾಗಿ ಒಗ್ಗೂಡುವುದು ಅಪರೂಪವಾಗುತ್ತಿದೆ. ಗೌಡ ಜನಾಂಗ ಸಂಸ್ಕೃತಿ, ಸಂಪ್ರದಾಯದ ಉಳಿವಿಕೆಗಾಗಿ ಒಗ್ಗಟ್ಟು ಪ್ರದರ್ಶಿಸಿರುವುದು ಶ್ಲಾಘನೀಯ ಎಂದರು.
ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಭಾಷೆ, ಸಂಸ್ಕೃತಿ ನಾಶವಾದರೆ ಒಂದು ಜನಾಂಗದ ನಾಗರಿಕತೆಯೇ ನಾಶವಾದಂತೆ. ಮಕ್ಕಳಿಗೆ ಮನೆಯಿಂದಲೇ ಕಲಿಸುವ ಕೆಲಸ ಆಗಬೇಕು. ಸಾಂಪ್ರದಾಯಿಕ ತಿಂಡಿ, ತಿನಿಸು, ಹಣ್ಣು ಸೇರಿದಂತೆ ಜಾನಪದ ಸಂಸ್ಕೃತಿಯ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಗೌಡ ಯುವ ವೇದಿಕೆಯಿಂದ ಜಾನಪದ ಲೋಕ ನಿರ್ಮಾಣವಾಗಿದೆ. ಅಪರೂಪದ ಕಾರ್ಯಕ್ರಮದ ಮೂಲಕ ಜನರನ್ನು ಒಗ್ಗೂಡಿಸುವಲ್ಲಿ ಯುವ ವೇದಿಕೆ ಮತ್ತು ಯುವಕ ಸಂಘ ಯಶಸ್ವಿಯಾಗಿದೆ ಎಂದರು.
ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಕೊಟ್ಟಕೇರಿಯನ ಡಾ.ಸಿ.ಪಿ.ಲಾವಣ್ಯಾ ಆಟಿ ತಿಂಗಳ ವಿಶೇಷತೆಯ ಕುರಿತು ಮಾತನಾಡಿದರು.
ಪಾರಾಣೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ಕುಶಾಲಪ್ಪ ಅವರು ಗೌಡ ಸಮಾಜದ ಕಟ್ಟಡದ ಅಭಿವೃದ್ಧಿಗೆ ಸಹಕರಿಸುವಂತೆ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರಿಗೆ ಮನವಿ ಪತ್ರ ನೀಡಿದರು. ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆ ವಹಿಸಿದ್ದರು.
ನರಿಯಂದಡ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಬೆಳಿಯಂಡ್ರ ಹರಿಪ್ರಸಾದ್, ತೋಟಂಬೈಲು ಬಿಂದು ಮಂತನ್, ಅಯ್ಯಪ್ಪ ಯುವಕ ಸಂಘದ ಗೌರವ ಅಧ್ಯಕ್ಷ ತೋಟಂಬೈಲು ಅನಂತಕುಮಾರ್, ಮೂಡಗದ್ದೆ ವಿನೋದ್, ಪ್ರೋಳಂಡ್ರ ಧನುಜ್, ಕಟ್ಟೆ ಮನೆ ಸೋನಾಜಿತ್, ಪುದಿಯನೆರವನ ರಿಷಿತ್ ಇತರರಿದ್ದರು
.