ಜಿಲ್ಲೆ

ಭಾಷಾವಿಜ್ಞಾನಿ ಪ್ರೊ. ಬಿ.ಬಿ. ರಾಜಪುರೋಹಿತ ನಿಧನ

ಹುಬ್ಬಳ್ಳಿ: ಖ್ಯಾತ ಭಾಷಾವಿಜ್ಞಾನಿ, ಕನ್ನಡ ಲೇಖಕ- ವಿಮರ್ಶಕ ಡಾ. ಬಿ.ಬಿ. ರಾಜಪುರೋಹಿತ (86) ಅವರು ಮಂಗಳವಾರ ಬೆಳಗ್ಗೆ ಮೈಸೂರಿನ ಸರಸ್ವತಿಪುರಂ ಸ್ವಗೃಹದಲ್ಲಿ ನಿಧನ ಹೊಂದಿದರು. ಅಲ್ಲಿಯೇ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಅವರಿಗಿರುವ ಇಬ್ಬರು ಪುತ್ರಿಯರು ಅಮೆರಿಕದಲ್ಲಿ ನೆಲೆಸಿದ್ದು ಕೊನೆ ಘಳಿಗೆಯಲ್ಲಿ ತಂದೆಯ ಮುಖದರ್ಶನದಿಂದ ವಂಚಿತರಾಗಿದ್ದಾರೆ.

ಮೂಲತಃ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸೊರಟೂರು ಗ್ರಾಮದ ಬಂಡೋ ಭೀಮಾಜಿ ರಾಜಪುರೋಹಿತ ಅವರು ಕುರ್ತಕೋಟಿ, ಕುಂದಗೋಳ, ಹುಬ್ಬಳ್ಳಿ- ಧಾರವಾಡಗಳಲ್ಲಿ ಶಿಕ್ಷಣ ಪಡೆದು ವಚನಸಾಹಿತ್ಯ ವ್ಯಾಕರಣ ಕುರಿತು ಡಾ. ಆರ್.ಸಿ. ಹಿರೇಮಠರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದವರು.

ಕೆಲ ವರ್ಷ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಡಾ. ರಾಜಪುರೋಹಿತ ಅವರು ಕನ್ನಡ ಹಾಗೂ ಭಾಷಾಶಾಸ್ತ್ರ ಉಪನ್ಯಾಸಕರಾಗಿ ತಿರುವನಂತಪುರದಲ್ಲಿ ಕೆಲಸ ಮಾಡಿದರು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಪ್ರೊಫೆಸರ್ ಮತ್ತು ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಜಪಾನದ ಟೋಕಿಯೋ ವಿಶ್ವವಿದ್ಯಾಲಯದ ವಿಸಿಟಿಂಗ್ ಪ್ರೊಫೆಸರ್ ಆಗಿದ್ದಾಗ ಕನ್ನಡ-ಇಂಗ್ಲಿಷ್-ಜಪನೀಸ್ ಶಬ್ದಕೋಶ ರಚಿಸಿದರು.

ನಿವೃತ್ತಿ ನಂತರ ಮೈಸೂರಿನಲ್ಲಿ ನೆಲೆಸಿದ ಡಾ. ರಾಜಪುರೋಹಿತ ಅವರು ಬೇಂದ್ರೆಯವರ ಸಾಹಿತ್ಯದ ಹಲವು ಮುಖಗಳನ್ನು ಪರಿಚಯಿಸುವ ಹನ್ನೊಂದು ಅಧ್ಯಯನಪೂರ್ಣ ಗ್ರಂಥ ರಚಿಸಿದರು. ಬೇಂದ್ರೆಯವರ ಸಮಗ್ರ ಕಾವ್ಯದ ನಿಘಂಟು ಗಮನಾರ್ಹ ಕೃತಿ. ಇಂಗ್ಲಿಷ್​ನಲ್ಲಿ ಹನ್ನೊಂದು, ಕನ್ನಡದಲ್ಲಿ 36 ಕೃತಿಗಳನ್ನು ರಚಿಸಿದ್ದಾರೆ.

ಆಧ್ಯಾತ್ಮವಾದಿಗಳಾಗಿದ್ದ ರಾಜಪುರೋಹಿತರು ಬ್ರಹ್ಮಚೈತನ್ಯರ ಕುರಿತು ಕನ್ನಡ ಮತ್ತು ಮರಾಠಿಯಲ್ಲಿ ಬರೆದಿದ್ದಾರೆ. ಇಂಗ್ಲಿಷ್, ಸಂಸ್ಕೃತ, ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಗಳ ವಿದ್ವಾಂಸರೊಂದಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಇವರು ಸ್ನೇಹ ಸಂಪರ್ಕ ಹೊಂದಿದ್ದರು.

ಶೈಲಿಶಾಸ್ತ್ರ ಮತ್ತು ಜ್ಞಾನಶಾಸ್ತ್ರ ಅಧ್ಯಯನ ಶಿಸ್ತುಗಳ ಕುರಿತು ಬರೆದ ಕೃತಿಗಳು ವಿದ್ವಾಂಸವರ್ಗದ ಗಮನ ಸೆಳೆದಿವೆ.