ಸಾಗರ: ಯಾವುದೇ ಒಂದು ಕೃತಿಯನ್ನು ಇನ್ನೊಂದು ಭಾಷೆಗೆ ಅನುವಾದಿಸುವಾಗ ಅದರ ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂತಹ ಒಂದು ಯಶಸ್ವಿ ಪ್ರಯತ್ನವನ್ನು ಡಾ. ಜಿ.ಎಸ್.ಭಟ್ ಅವರ ಗ್ಲಾನಿ ನಾಟಕವನ್ನು ಸಂಸ್ಕೃತಕ್ಕೆ ಅನುವಾದ ಮಾಡುವ ಮೂಲಕ ಲೇಖಕ ಮಂಜಪ್ಪ ಬಿ.ಜಿ. ಕರ್ಕಿಕೊಪ್ಪ ನಡೆಸಿದ್ದಾರೆ ಎಂದು ವಿದ್ವಾಂಸ ಪ್ರೊ. ಕೆ.ಆರ್.ಕೃಷ್ಣಯ್ಯ ಹೇಳಿದರು. ಸಾಗರದ ಶೃಂಗೇರಿ ಶಂಕರ ಮಠದಲ್ಲಿ ಭಾನುವಾರ ಬೆಂಗಳೂರಿನ ಚಾರುಮತಿ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಜಿ.ಎಸ್.ಭಟ್ ಅವರ ಮಕ್ಕಳ ಮೂರು ನಾಟಕ ರಾಜ ಆದಿಪಾಶ, ಗ್ಲಾನಿ ಕನ್ನಡ ನಾಟಕದ ಸಂಸ್ಕೃತ ಅನುವಾದಿತ ಪುಸ್ತಕ ಹಾಗೂ ಉಪನ್ಯಾಸಕ ಯೋಗೀಶ್ ಅವರ ಹೊಳೆಸಾಲಿನ ಒಂಟಿ ಮರ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಡಾ. ಜಿ.ಎಸ್.ಭಟ್ ತಮ್ಮ ಕೃತಿಗಳ ಮೂಲಕ ನಡೆಸಿರುವ ಪ್ರಯೋಗ, ಪ್ರಯತ್ನಗಳು ಮಾರ್ಗಸೂಚಿಯಾಗಿದೆ. ಯಕ್ಷಗಾನದಲ್ಲಿಯೂ ಸಾಕಷ್ಟು ಕೃತಿಗಳನ್ನು ಹೊರತಂದಿದ್ದಾರೆ. ಎಂದಿಗೂ ನಾಟಕಗಳು ಬಹಳ ಸುಲಭವಾಗಿ ಜನರನ್ನು ತಲುಪುತ್ತವೆ. ಅವರ ರಾಜಾ ಆದಿಪಾಶ ಗ್ರೀಕ್ ದುರಂತ ನಾಟಕ ಈಡಿಪಸ್‌ನ ಯಕ್ಷಗಾನದ ರೂಪಾಂತರವಾಗಿ ಹೊರತರಲಾಗಿದೆ. ಪುರಾಣದ ಕೆಲವು ಪಾತ್ರ ಮತ್ತು ಸಂಗತಿಗಳನ್ನು ಇಟ್ಟುಕೊಂಡು ಮಕ್ಕಳ ಮೂರು ನಾಟಕಗಳನ್ನು ಹೊರತಂದಿದ್ದಾರೆ. ಯೋಗೀಶ್ ಭಟ್ ಅವರ ಹೊಳೆಸಾಲಿನ ಒಂಟಿ ಮರ ಎರಡನೇ ಕವನ ಸಂಕಲನವಾಗಿದೆ. ಇಲ್ಲಿ ಕವನಗಳು ಮಾತಿಗೆ ವ್ಯಾವಹಾರಿಕವಾಗಿರುವ ಅರ್ಥಕ್ಕಿಂತ ಭಿನ್ನವಾದ ಅರ್ಥವನ್ನು ನೀಡುತ್ತವೆ ಎಂದರು. ಕೃತಿಗಳ ಕುರಿತು ಮಾತನಾಡಿದ ಸಂಸ್ಕೃತ ವಿದ್ವಾಂಸ ಗಜಾನನ ಭಟ್ ರೇವಣಕಟ್ಟ, ಡಾ. ಜಿ.ಎಸ್.ಭಟ್ ಅವರ ಗ್ಲಾನಿ ಕನ್ನಡ ನಾಟಕದ ಸಂಸ್ಕೃತ ಅನುವಾದವನ್ನು ಮಂಜಪ್ಪ ತುಂಬ ಸಮರ್ಥವಾಗಿ ಮಾಡಿದ್ದಾರೆ. ಈ ನಾಟಕವನ್ನು ವಾಲ್ಮೀಕಿಯ ಹೃದಯದ ಭಾವವನ್ನು ಅರಿತು ವ್ಯವಸ್ಥಿತವಾಗಿ ಪಾತ್ರಗಳನ್ನು ಮೂಡಿಸಿದ್ದಾರೆ ಎಂದು ಹೇಳಿದರು. ಬೆಂಗಳೂರಿನ ಚಾರುಮತಿ ಪ್ರಕಾಶನದ ಮುಖ್ಯಸ್ಥ ಬಿ.ಎಸ್.ವಿದ್ಯಾರಣ್ಯ, ಲೇಖಕ ಮಂಜಪ್ಪ ಕರ್ಕಿಕೊಪ್ಪ, ಶಂಕರ ಮಠದ ಧರ್ಮಾಕಾರಿ ಅಶ್ವಿನಿಕುಮಾರ್, ಉಪನ್ಯಾಸಕ ಯೋಗೀಶ್ ಜಿ. ಭಟ್, ಸುಶೀಲಾ ಭಟ್, ಅಶ್ವಿನಿ, ಸಿರಿ ವೈ. ಭಟ್ ಇತರರಿದ್ದರು.
ಇಂದು ಯುವ ಲೇಖಕರಿಗೆ ಪುಸ್ತಕಗಳನ್ನು ತರುವುದು ತುಂಬ ಸವಾಲಿನ ಸಂಗತಿ. ಅವರಿಗೆ ಮಾರ್ಗದರ್ಶನದ ಅವಶ್ಯವಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಅವರಿಗೆ ಒಂದಿಷ್ಟು ಶೈಕ್ಷಣಿಕ ಸಂಗತಿಗಳು ಪರಿಚಯವಾಗುತ್ತದೆ. ಯಾವುದೇ ಲೇಖಕ ಪುಸ್ತಕ ಪ್ರಕಟಣೆಯ ಮೂಲಕ ತನ್ನ ಬದುಕು ನಡೆಸಲು ಸಾಧ್ಯವಿಲ್ಲ ಮತ್ತು ವ್ಯಾವಹಾರಿಕವಾಗಿಯೂ ಗಟ್ಟಿಯಾಗಿ ತೊಡಗಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರಕಟಣೆ, ಪುಸ್ತಕ ಮತ್ತು ಲೇಖಕ ಇದೊಂದು ರೀತಿಯ ಸಂಬಂಧದ ಮೂಲಕ ಮುನ್ನಡೆಯುತ್ತದೆ. ಡಾ. ಜಿ.ಎಸ್.ಭಟ್, ಲೇಖಕ