ಜಿಲ್ಲೆ

ಭಾಷಾ ಶಿಕ್ಷಕರು ಅಗತ್ಯಕ್ಕೆ ತಕ್ಕಂತೆ ಒಗ್ಗಿಕೊಳ್ಳಲಿ

ಮೈಸೂರು

ಭಾಷಾ ಶಿಕ್ಷಕರು ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಪ್ರಸ್ತುತಕ್ಕೆ ಒಗ್ಗಿಕೊಳ್ಳಬೇಕು ಎಂದು ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾಲಯದ ಆಂಗ್ಲ ಮತ್ತು ವಿದೇಶಿ ಭಾಷೆಗಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಪದ್ಮನಾಭನ್ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಉಪಕರಣಗಳ ಯುಗದಲ್ಲಿ ಭಾಷಾ ಶಿಕ್ಷಕರ ನಿರ್ಣಾಯಕ ಪಾತ್ರವಿದೆ. ಆಂಗ್ಲಭಾಷಾ ಶಿಕ್ಷಣ ತಜ್ಞರು ಹೊಸ ಹೊಸ ವೃತ್ತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಆಂಗ್ಲ ಭಾಷೆಯು ಅಂತಾರಾಷ್ಟ್ರೀಯ ಭಾಷೆಯಾಗಿದ್ದು, ಭಾಷಾ ಶಿಕ್ಷಕರು ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು ಎಂದರು.

ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯಗತ್ಯ ಮತ್ತು ಹೆಚ್ಚು ಪ್ರಯೋಜನಕಾರಿ. ಆಂಗ್ಲಭಾಷಾ ಅಧ್ಯಾಪಕರ ಭಾಷಾ ಬೋಧನೆಯನ್ನು ಪರಿಣಾಮಕಾರಿಯಾಗಿಸುವಲ್ಲಿ ಇವು ನೆರವಾಗುತ್ತವೆ ಎಂದರು.

ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾಲಯದ ಆಂಗ್ಲ ಮತ್ತು ವಿದೇಶಿಭಾಷೆಗಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿ. ಡೇವಿಡ್ ಅರ್ಪಿತ್ ರಾಜ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದ್ದು,

ಅದನ್ನು ಪರಿಣಾಮಕಾರಿಯಾಗಿ ಮಾಡಲು ಕೆಲವು ಅಗತ್ಯ ಗುಣ ಬೆಳೆಸಿಕೊಳ್ಳಬೇಕು. ಈ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳು ಶಿಕ್ಷಕರಿಗೆ ಅತ್ಯಗತ್ಯ. ಶಿಕ್ಷಣ ತಜ್ಞರಿಗೆ ಸಮಕಾಲೀನ ಸಂದರ್ಭಕ್ಕೆ ಅನುಗುಣವಾಗಿ ಅಗತ್ಯ ಬದಲಾವಣೆಯನ್ನು ಮನವರಿಕೆ ಮಾಡುವಂತೆ ಇವುಗಳನ್ನು ವಿನ್ಯಾಸಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ನುಡಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ನಿರಂತರವಾಗಿ ಶಿಕ್ಷಣದಲ್ಲಿ ಆಗುತ್ತಿರುವ ಬದಲಾವಣೆಗೆ ತಕ್ಕಂತೆ ಅಧ್ಯಾಪಕರ ಜ್ಞಾನದ ವಿಕಾಸದ ಅಗತ್ಯವಿದೆ. ಪರಿಣಾಮಕಾರಿ ಬೋಧನೆಯು ಕೇವಲ ಜ್ಞಾನದ ಪ್ರಸಾರಕ್ಕಷ್ಟೇ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಅವರ ಸಮಗ್ರ ಅಭಿವೃದ್ಧಿಯನ್ನು ರೂಪಿಸುವಲ್ಲಿ ನೆರವಾಗಬೇಕು ಎಂದರು.

ಪರಿಣಾಮಕಾರಿ ಬೋಧನೆ, ಶೈಕ್ಷಣಿಕ ಉತ್ಕೃಷ್ಟತೆ ಮತ್ತು ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸಾರಥ್ಯ ವಹಿಸುವ ನಾಯಕತ್ವಗುಣ ಬೆಳೆಸಿಕೊಳ್ಳುವಂತೆ ಅಧ್ಯಾಪಕರನ್ನು ರೂಪಿಸಲು ಶಿಕ್ಷಣದಲ್ಲಿ ಆಂಗ್ಲಭಾಷಾ ಅಧ್ಯಾಪಕರಿಗೆ ಇಂತಹ ತರಬೇತಿ ಕಾರ್ಯಾಗಾರಗಳು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಡಾ.ಎಂ.ಪ್ರಭು, ಆಂಗ್ಲಭಾಷಾ ಅಧ್ಯಾಪಕಿ ಕೆ.ಎನ್ ಮಂಜುಳಾ, ಕಾರ್ಯಕ್ರಮದ ಸಂಚಾಲಕಿಯರಾದ ಡಾ. ಶೋಭಾ, ಪಿ. ದೀಪಾ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಆರ್.ನಿವೇದಿತಾ, ಡಾ.ಎಂ.ಐ. ಆಯೇಷಾ ಉಪಸ್ಥಿತರಿದ್ದರು.