ಜಿಲ್ಲೆ

ಭಾವೈಕ್ಯದಿಂದ ಹಬ್ಬ ಆಚರಿಸಲಿ

ಚಿಕ್ಕೋಡಿ: ಗಣೇಶ ಹಬ್ಬ ಭಾವೈಕ್ಯ ಮತ್ತು ಶಾಂತಿಯಿಂದ ಆಚರಿಸಬೇಕು ಎಂದು ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ ಹೇಳಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಣೇಶ ಉತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಗಣೇಶ ಸ್ಥಾಪನೆಗೆ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಧ್ವನಿವರ್ಧಕ ಬಳಸಬಾರದು. ಸಾರ್ವಜನಿಕರಿಗೆ ಹಾಗೂ ತುರ್ತು ವಾಹನಗಳ ಸಂಚಾರಕ್ಕೆ ಅಡೆತಡೆಯಾಗದಂತೆ ಮಂಟಪ ನಿರ್ಮಿಸಬೇಕು. ವಿದ್ಯುತ್, ದೂರವಾಣಿ ಕಂಬಕ್ಕೆ ಪರಪರಿ ಕಟ್ಟಬಾರದು. ಸಂಚಾರಕ್ಕೆ ತೊಂದರೆಯಾಗದಂತೆ ಮಹಾಪ್ರಸಾದ ಆಯೋಜಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಮಾತನಾಡಿ, ಗಣೇಶ ಮಂಡಳಗಳು ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಸಿ ಪಾಲಿಸಿಕೊಂಡು ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕೆಂದರು.

ಗಣೇಶ ಮಂಡಳಗಳು ಸ್ಥಾಪಿಸಿರುವ ಮಂಟಪಗಳಲ್ಲಿ ರಾತ್ರಿ ಹೊತ್ತು ಯಾರು ಇರುವುದಿಲ್ಲ. ಇದರಿಂದ ಅಹಿತಕರ ಘಟನೆ ನಡೆಯುವ ಸಂದರ್ಭ ಇರುತ್ತದೆ. ಆದ್ದರಿಂದ ಸದಸ್ಯರು ದಿನದ ೨೪ ಗಂಟೆ ಮಂಡಳಿಯ ಪಾಳಿ ಪ್ರಕಾರ ಗಣೇಶ ಮಂಟಪದಲ್ಲಿ ಇರಬೇಕು. ಮಂಡಳಗಳು ಜನರಿಗಾಗಿ ಪ್ರಸಾದ ವ್ಯವಸ್ಥೆ ಮಾಡುತ್ತೇವೆ. ಅದನ್ನು ತಾಲೂಕು ವೈದ್ಯಾಧಿಕಾರಿಗಳಿಂದ ಪರಿಶೀಲಿಸಿ ನೀಡುವುದು ಸೂಕ್ತ ಎಂದರು.

ಪಿಎಸ್‌ಐ ಬಸಗೌಡ ನೇರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಇರ್ಫಾನ್ ಬೇಪಾರಿ, ಅನಿಲ ಮಾನೆ, ಸೋಮು ಗವನಾಳೆ, ಬಾಬು ಮಿರ್ಜೆ ತಹಸೀಲಾರ್ ಚಿದಂಬರ ಕುಲಕರ್ಣಿ, ಸಿಪಿಐ ವಿಶ್ವನಾಥ ಚೌಗಲೆ ಇತರರಿದ್ದರು.