ಯಳಂದೂರು: ತಾಲೂಕಿನ ಮದ್ದೂರು ಗ್ರಾಮದ ಬಳಿ ಸುವರ್ಣಾವತಿ ನದಿ ದಡದಲ್ಲಿರುವ ಹಜರತ್ ಖ್ವಾಜಾ ದಿಲ್ಬರ್ ಷಾ ವಲಿ ದರ್ಗಾದಲ್ಲಿ ಗುರುವಾರ ರಾತ್ರಿ ಸಂಭ್ರಮ ಸಡಗರಗಳಿಂದ ಉರುಸ್(ಗಂಧೋತ್ಸವ) ನಡೆಯಿತು.
ಇದಕ್ಕಾಗಿ ದರ್ಗಾವನ್ನು ವಿಶೇಷ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ 4 ಗಂಟೆಗೆ ತಾಲೂಕಿನ ಮಾಂಬಳ್ಳಿ ಗ್ರಾಮದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜೆ. ಶಕೀಲ್ ಅಹಮ್ಮದ್ ಅವರ ಮನೆಯಿಂದ ದೇವರನಾಮ ಹಾಡುವ ಫಕೀರರ ತಂಡ, ಡೊಳ್ಳು, ಬ್ಯಾಂಡ್‌ಸೆಟ್, ಮೈನವರೀಳಿಸುವ ದೊಣ್ಣೆ ವರಸೆಯ ಕಸರತ್ತಿನ ತಂಡಗಳು ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮಾಂಬಳ್ಳಿ, ಅಗರ ಹಾಗೂ ಮದ್ದೂರು ಗ್ರಾಮದಲ್ಲಿ ಮೆರವಣಿಗೆ ಮೂಲಕ ಗಂಧದ ಬಿಂದಿಗೆಯನ್ನು ದರ್ಗಾಕ್ಕೆ ತರಲಾಯಿತು.
ರಾತ್ರಿ 8.45ಕ್ಕೆ ವಿಶೇಷ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಲಾಯಿತು. ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದರ್ಗಾದ ದರ್ಶನ ಪಡೆದು ವಿಶೇಷ ದುವಾ ಸಲ್ಲಿಸಿದರು.
ಹಿಂದುಗಳೂ ಭಾಗಿ
ಈ ದರ್ಗಾದಲ್ಲಿ ಪ್ರತಿ ವರ್ಷ ರಂಜಾನ್ ಹಬ್ಬದ ನಂತರ ಬರುವ ಗುರುವಾರ ಗಂಧೋತ್ಸವ ನಡೆಯುವ ವಾಡಿಕೆ ಇದೆ. ಇಲ್ಲಿಗೆ ಮುಸ್ಲಿಮರು ಮಾತ್ರವಲ್ಲದೆ ಹಿಂದು ಭಕ್ತರೂ ಪಾಲ್ಗೂಳ್ಳುವುದು ವಿಶೇಷವಾಗಿದೆ. ಹರಕೆ ಹೊತ್ತು ಬರುವ ಅನೇಕ ಹಿಂದು ಭಕ್ತರು ಇಲ್ಲಿನ ಗೋರಿಗೆ ಹೂವಿನ ಚಾದರ್‌ನ್ನು ಹೊದಿಸಿ ಗಂಧ ಹಚ್ಚಿ, ಗಂಧದಕಡ್ಡಿ, ಸಾಂಬ್ರಾಣಿಯನ್ನು ಹಾಕಿ ಇದರ ಮುಂಭಾಗದಲ್ಲಿರುವ ನಿಶಾನ್(ದೊಡ್ಡದಾದ ಧ್ವಜಸ್ತಂಭ)ಗೆ ಪ್ರದಕ್ಷಿಣೆಯನ್ನು ಹಾಕಿ ಭಕ್ತಿ ಮೆರೆದರು.
ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಹಾಕಿಸಿಕೊಂಡು ಭಕ್ತಿ ಮೆರೆದರು. ನೆರೆದಿದ್ದ ಭಕ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಈ ಬಾರಿ ಖವ್ವಾಲಿ ಕಾರ್ಯಕ್ರಮ ನಡೆಯಲಿಲ್ಲ.