ಕಲಬುರಗಿ: ಗಣರಾಜ್ಯೋತ್ಸವ ನಿಮಿತ್ತ ನಗರ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಕೈದಿಗಳಿಂದಲೇ ಕಿರುನಾಟಕ ಪ್ರದರ್ಶಿಸಿ ಭಾವೈಕ್ಯದ ಸಂದೇಶ ಸಾರಲಾಯಿತು. ಜೈಲಿನ ಮುಖ್ಯ ಅಧಿಕ್ಷಕ ಪಿ.ರಂಗನಾಥ ನಿರ್ದೇಶನದಲ್ಲಿ ಸಜಾ ಬಂಧಿಗಳು ವಿವಿಧತೆಯಲ್ಲಿ ಏಕತೆ ಸಾರುವ ಮೂಕಾಭಿನಯದ ಕಿರು ನಾಟಕ ಪ್ರದರ್ಶಿಸಿ ಭೇಷ್ ಎನಿಸಿಕೊಂಡರು.
ಭೂಮಿಯಲ್ಲಿ ದೊರೆತ ಶಿಲೆಯನ್ನು ಹಿಂದು, ಕ್ರೆಸ್ತ, ಮುಸ್ಲಿಂ, ಬೌದ್ಧ ವೇಷಭೂಷಣ ತೊಟ್ಟವರು ತಮ್ಮ ತಮ್ಮ ಧರ್ಮಕ್ಕೆ ತಕ್ಕಂತೆ ಕೆತ್ತಿ ಮೂರ್ತಿ ಮಾಡಿದರು. ನಾನೇ ಶ್ರೇಷ್ಠ, ನನ್ನ ಧರ್ಮವೇ ಶ್ರೇಷ್ಠ ಎಂದು ಪರಸ್ಪರ ಜಗಳವಾಡುವಾಗ ಗಾಂಧೀಜಿ ಆಗಮಿಸಿ ಭಾರತದ ವಿವಿಧ ಸಂಸ್ಕೃತಿ, ಪರಂಪರೆಯನ್ನು ಮನದಟ್ಟು ಮಾಡಿಕೊಟ್ಟರು. ಎಲ್ಲರೂ ಒಂದಾಗಿ ಸಾಗಬೇಕು ಎಂಬ ಸಂದೇಶವನ್ನು ಇಡೀ ನಾಟಕ ಸಾರಿತು.
ಜೈಲಿನ ಮುಖ್ಯ ಅಧೀಕ್ಷಕ ಪಿ.ರಂಗನಾಥ ಮಾತನಾಡಿ, ಉತ್ತಮ ನಡತೆ, ಗುಣಗಳೊಂದಿಗೆ ನಾವೆಲ್ಲ ಭಾರತಾಂಬೆ ಮಕ್ಕಳು ಎಂಬ ಭಾವ ಬೆಳೆಸಿಕೊಳ್ಳಬೇಕು. ಕಾರಾಗೃಹದಲ್ಲಿ ಹಮ್ಮಿಕೊಳ್ಳುವ ವಿವಿಧ ಕೌಶಲ ತರಬೇತಿ, ಶಿಕ್ಷಣದ ಸದುಪಯೋಗ ಪಡೆದು ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಳ್ಳಬೇಕು ಎಂದರು.
ವೈದ್ಯಾಧಿಕಾರಿಗಳಾದ ಡಾ.ಅಣ್ಣಾರಾವ, ಡಾ.ರಾಹುಲ್ ಭರ್ದಿ, ಸಹಾಯಕ ಅಧೀಕ್ಷಕ ಹುಸೇನಿ ಪೀರ್, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಕಚೇರಿ ಅಧೀಕ್ಷಕ ಗುರುಶೇಶ್ವರ ಶಾಸ್ತಿç, ಜೈಲರ್‌ಗಳಾದ ಸುನಂದಾ ವಿ., ಪರಮಾನಂದ ಹರವಾಳ, ಸಾಗರ ಪಾಟೀಲ್ ಇತರರಿದ್ದರು. ಬಿ.ಸುರೇಶ ಸ್ವಾಗತಿಸಿ ವಂದಿಸಿದರು. ನಾಗರಾಜ ಮುಲಗೆ ನಿರೂಪಣೆ ಮಾಡಿದರು.