ವಚನ ಜಾತ್ರೆ ಕುರಿತು ಭಾಲ್ಕಿಯಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾಹಿತಿ ನೀಡಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶಶಿಧರ ಕೋಸಂಬೆ, ರೇಖಾ ಮಹಾಜನ, ಶಶಿಕಲಾ ವಾಲೆ, ಮಲ್ಲಮ್ಮ ನಾಗನಕೇರೆ ಇದ್ದರು. 
ಜಿಲ್ಲೆ

ಭಾಲ್ಕಿಯಲ್ಲಿ ವಚನ ಜಾತ್ರೆ ಇಂದಿನಿಂದ

ಭಾಲ್ಕಿ: ಪಟ್ಟಣದಲ್ಲಿ ವಚನ ಜಾತ್ರೆ-೨೦೨೫ ಮತ್ತು ಶತಾಯುಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ೨೬ನೇ ಸ್ಮರಣೋತ್ಸವ ಅರ್ಥಪೂರ್ಣವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಭಾನುವಾರ ಸಂಜೆ ೬ಕ್ಕೆ ಮೂರು ದಿನದ ವಚನ ಜಾತ್ರೆಗೆ ಚಾಲನೆ ಸಿಗಲಿದೆ. ಗೋರ್ಟಾ ಶ್ರೀ ಪ್ರಭುದೇವ ಸ್ವಾಮೀಜಿ, ಬೆಳಗಾವಿ-ಯಮಕನಮರಡಿ ಶ್ರೀ ಸಿದ್ಧಬಸವ ದೇವರು ಗೋಷ್ಠಿಯ ಸಾನ್ನಿಧ್ಯ ವಹಿಸಲಿದ್ದು, ಕೌಠಾ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಅನುಭಾವ ನೀಡಲಿದ್ದಾರೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ ಗೋಷ್ಠಿ ಉದ್ಘಾಟಿಸಲಿದ್ದಾರೆ. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಅಧ್ಯಕ್ಷತೆ ವಹಿಸುವರು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೋಮವಾರ ಸಂಜೆ ೬ಕ್ಕೆ ನಡೆಯಲಿರುವ ಜಾಗತೀಕರಣ ಕಾಲದಲ್ಲೂ ಬಸವವಾದದ ಪ್ರಸ್ತುತತೆ ಗೋಷ್ಠಿಯಲ್ಲಿ ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಬೀದರ್‌ನ ಪೂಜ್ಯ ಡಾ.ಗಂಗಾಂಬಿಕಾ ಸಾನ್ನಿಧ್ಯ ವಹಿಸಲಿದ್ದು, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ ಗಾಜನೂರು ಅನುಭಾವ ನೀಡುವರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಅಧ್ಯಕ್ಷತೆ ವಹಿಸುವರು. ಏ.೨೨ರಂದು ಬೆಳಗ್ಗೆ ೬ಕ್ಕೆ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮವರೆಗೆ ಬಸವ ನಡಿಗೆ ನಡೆಯಲಿದೆ. ಔಸಾ ಶಿವಛತ್ರಪತಿ ಶಿಕ್ಷಣ ಪ್ರಸಾರಕ ಮಂಡಳ ಸಂಸ್ಥಾಪಕ ನಾಮದೇವರಾವ ಪವಾರ್ ಷಟಸ್ಥಲ ಧ್ವಜಾರೋಹಣ, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಸಿಂದಬಂದಗೆ ಬಸವಗುರು ಪೂಜೆ ನೆರವೇರಿಸುವರು. ಬೆಳಗ್ಗೆ ೧೧ಕ್ಕೆ ರಾಜ್ಯಪಾಲ ಥಾವರಚಂದ ಗೆಹಲೋತ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಅಥಣೇಶ ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ ಎಂದು ವಿವರಿಸಿದರು.

ಸಂಜೆ ೪ಕ್ಕೆ ನಡೆಯುವ ಸಮಾರೋಪದಲ್ಲಿ ಗುಳೇದಗುಡ್ಡ ಶ್ರೀ ಬಸವರಾಜ ಪಟ್ಟದಾರ್ಯ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮೀಜಿ, ಹುಲಸೂರು ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಆನಂದ ದೇವರು, ಪೂಜ್ಯ ಚಿ.ದೊಡ್ಡಪ್ಪ ಅಪ್ಪ, ಮೈತ್ರಾದೇವಿ ತಾಯಿ, ಡಾ.ಮಹಾದೇವಮ್ಮ ತಾಯಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಏ.೨೨ರ ಮಧ್ಯಾಹ್ನ ೩ಕ್ಕೆ ವಿವಿಧ ಕ್ಷೇತ್ರದ ಸಾಧಕರಿಗೆ ನಾನಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಮಾರೋಪದಲ್ಲಿ ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಕೊಟ್ಟೂರಿನ ನಾಡೋಜ ಕುಂ.ವೀರಭದ್ರಪ್ಪ, ಪಶ್ಚಿಮ ಬಂಗಾಳದ ಐಪಿಎಸ್ ಅಮಿತ ಜವಳಗಿ, ನವದೆಹಲಿಯ ಅನಂತ ಬಿರಾದಾರ್, ಕಲಬುರಗಿ ಸಮಾಜ ಸೇವಕ ಉಮೇಶ ಶೆಟ್ಟಿ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಪ್ರವಚನಾ ಸೇವಾ ಸಮಿತಿ ಅಧ್ಯಕ್ಷೆ ಶಶಿಕಲಾ ಅಶೋಕ ವಾಲೆ, ವಚನ ಪಾರಾಯಣ ಸೇವಾ ಸಮಿತಿ ಅಧ್ಯಕ್ಷೆ ರೇಖಾ ಮಹಾಜನ, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಇದ್ದರು.

ವಿವಿಧ ಗ್ರಂಥ ಲೋಕಾರ್ಪಣೆ: ವಚನ ಜಾತ್ರೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಮುದ್ರಿತ ವಿವಿಧ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ತಿಳಿಸಿದ್ದಾರೆ. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಂಪಾದಕತ್ವದ ಮಾತೆಂಬುದು ಜ್ಯೋತಿರ್ಲಿಂಗ, ಶರಣರ ವಚನ ಬೇವ ಸವಿದಂತೆ, ವಚನಾಭಿಷೇಕ, ವಚನ ಪ್ರಸಾದ (೪ನೇ ಮುದ್ರಣ), ಚೇತನಾ ಸಂತೋಷಕುಮಾರ ಚನ್ನಶೆಟ್ಟಿ ರಚಿಸಿದ ನವಚೇತನ, ಶಿವಸ್ವಾಮಿ ಚೀನಕೇರಾ ರಚಿಸಿದ ಸಮತಾವಾದ ಒಂದು ವಿವೇಚನೆ ಮತ್ತು ಮರಾಠಿ ಭಾಷೆಯಲ್ಲಿ ಡಾ.ಅಶೋಕ ಮೇನಕುದಳೆ ರಚಿಸಿರುವ ಸಮತಾಸೂರ್ಯ ಮಹಾತ್ಮ ಬಸವೇಶ್ವರ (೯ನೇ ಆವೃತ್ತಿ) ಮತ್ತು ಕ್ರಾಂತಿಕಾರಿ ಮಹಾತ್ಮ ಬಸವೇಶ್ವರ (೫ನೇ ಆವೃತ್ತಿ) ಗ್ರಂಥಗಳು ಲೋಕಾರ್ಪಣೆ ಆಗಲಿವೆ.

ವಚನ ಸಾಹಿತ್ಯ, ಕನ್ನಡ ಭಾಷೆ ಬಗ್ಗೆ ಶತಾಯುಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಅಪಾರ ಅಭಿಮಾನ ಹೊಂದಿದ್ದರು. ಅಂತಲೇ ಪ್ರತಿವರ್ಷ ಪೂಜ್ಯರ ಸ್ಮರಣೋತ್ಸವ ಜತೆಗೆ ವಚನ ಜಾತ್ರೆ ಆಚರಿಸುವ ಪರಂಪರೆ ಹಾಕಿಕೊಂಡಿದ್ದೇವೆ.

| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು

ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್ ಬಸವಕಲ್ಯಾಣ

ಮೂರು ದಿನದ ವಚನ ಜಾತ್ರೆ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ರಾಜಕೀಯ ಗಣ್ಯರು, ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ಸದ್ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.

| ಶ್ರೀ ಗುರುಬಸವ ಪಟ್ಟದ್ದೇವರು

ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ