ವಿಜಯವಾಣಿ ಸುದ್ದಿಜಾಲ ಧಾರವಾಡ
ರಜಾಕಾರರ ಹಾವಳಿ ಕಾಲದಲ್ಲಿ ಶಾಲೆ ಹೊರಗೆ ಉರ್ದು ಫಲಕ ಹಾಕಿ ಕನ್ನಡ ಕಲಿಸುವ ಮೂಲಕ ಹಿರೇಮಠ ಸಂಸ್ಥಾನದ ಚನ್ನಬಸವ ಪಟ್ಟದ್ದೇವರು ಗಡಿ ಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸಲು ಶ್ರಮಿಸಿದ್ದಾರೆ. ಅವರ ಪಯ್ರತ್ನದ ಫಲದಿಂದಲೇ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಉಳಿದಿದೆ. ಕನ್ನಡದ ಶಕ್ತಿ ಕುಂದಿದ ಕಾಲದಲ್ಲಿ ಕನ್ನಡ ಕಲಿಸಿದ್ದು ಶ್ರೇಷ್ಠ ಕಾರ್ಯ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ 134ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬೀದರ ಜಿಲ್ಲೆ ಭಾಲ್ಕಿಯ ಹಿರೇಮಠ ಸಂಸ್ಥಾನಕ್ಕೆ ‘ಸಿರಿಗನ್ನಡಂ ಗೆಲ್ಗೆ ರಾ.ಹ. ದೇಶಪಾಂಡೆ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ ಎಂದೇ ಪ್ರಸಿದ್ಧವಾಗಿದೆ. ಆ ಮಠಕ್ಕೆ ಪ್ರಶಸ್ತಿ ನೀಡುವುದೆಂದರೆ ನಮಗೆ ನಾವೇ ಪ್ರಶಸ್ತಿ ಕೊಟ್ಟುಕೊಂಡಂತೆ. ಕನ್ನಡ ಭಾಷೆಗೆ ಆದ್ಯತೆ, ಪ್ರಾಧಾನ್ಯತೆ ನೀಡಿದ್ದ ರಾ.ಹ. ದೇಶಪಾಂಡೆ ವಿದ್ಯಾವರ್ಧಕ ಸಂಘ ಆರಂಭಿಸಿದರು. ಇಂತಹ ಮಹನೀಯರ ಕನಸು ನನಸಾಗಿಸುವ ದಾರಿಯಲ್ಲಿ ನಾವೆಲ್ಲ ಸಾಗಬೇಕು ಎಂದ ಅವರು, ಕನ್ನಡದ ಅಭಿಮಾನದ ಬಗ್ಗೆ ಬರೀ ಮಾತನಾಡಿದರೆ ಸಾಲದು. ಅನುಷ್ಠಾನಕ್ಕೆ ತರುವ ಕೆಲಸ ಆಗಬೇಕು ಎಂದರು.
ಹಿರೇಮಠ ಸಂಸ್ಥಾನದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಬೀದರ ಭಾಗದಲ್ಲಿ ಕನ್ನಡ ಉಳಿಯಲು ಮಠದ ಶ್ರೀ ಚನ್ನಬಸವ ಪಟ್ಟದ್ದೇವರೇ ಕಾರಣ. ಕನ್ನಡ ಶಾಲೆಗಳನ್ನು ಆರಂಭಿಸಿ ಮಕ್ಕಳಿಗೆ ಅನ್ನ ದಾಸೋಹದೊಂದಿಗೆ ಕನ್ನಡ ಜ್ಞಾನದಾಸೋಹ ನೀಡಿದ್ದಾರೆ ಎಂದರು.
ನಮ್ಮ ಸಂಸ್ಥೆ ಮಕ್ಕಳು ಕನ್ನಡದಲ್ಲೇ ಓದಿ ಎಲ್ಲ ಕ್ಷೇತ್ರದ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಸಂಘದ ಪ್ರಶಸ್ತಿಯಿಂದ ಇನ್ನಷ್ಟು ಸೇವೆ ಮಾಡಲು ಪ್ರೋತ್ಸಾಹ ಸಿಕ್ಕಂತಾಗಿದೆ. ನಮ್ಮ ಉದ್ದೇಶ, ದಾರಿ ಸರಿಯಾಗಿದ್ದರೆ ಯಾರಿಗೂ ಹೆದರಬೇಕಾಗಿಲ್ಲ ಎಂದರು.
ರಾ.ಹ. ದೇಶಪಾಂಡೆ ಕುರಿತು ಡಾ. ಸಂಜೀವ ಕುಲಕರ್ಣಿ, ಡಾ. ಗಂಗೂಬಾಯಿ ಹಾನಗಲ್ ಕುರಿತು ವಿಶ್ವೇಶ್ವರಿ ಹಿರೇಮಠ, ಭಾಲ್ಕಿ ಹಿರೇಮಠ ಸಂಸ್ಥಾನದ ಬಗ್ಗೆ ಡಾ. ಶಶಿಧರ ತೋಡಕರ ಮಾತನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಡಾ. ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ, ಇತರರು ಇದ್ದರು.