ಭಾಲ್ಕಿ: ಪಟ್ಟಣದ ಪುರಸಭೆಗೆ ನಿರೀಕ್ಷೆಯಂತೆ ನೂತನ ಅಧ್ಯಕ್ಷರಾಗಿ ಅನಿಲ ಕಲ್ಯಾಣರಾವ ಸುಂಟೆ ಮತ್ತು ಉಪಾಧ್ಯಕ್ಷರಾಗಿ ಅಶೋಕ ಅರ್ಜುನ ಗಾಯಕವಾಡ ಅವಿರೋಧವಾಗಿ ಆಯ್ಕೆಯಾದರು.
ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಇಲ್ಲಿನ ಪುರಸಭೆ ಕಚೇರಿ ಸಭಾಂಗಣದಲ್ಲಿ ಚುನಾವಣೆ ನಿಗದಿಯಾಗಿತ್ತು. ಎರಡೂ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಚುನಾವಣಾಧಿಕಾರಿ, ತಹಸೀಲ್ದಾರ್ ಕೀರ್ತಿ ಚಾಲಕ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ವಿಶೇಷ ಆಹ್ವಾನಿತರಾದ ಶಾಸಕ ಈಶ್ವರ ಖಂಡ್ರೆ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ, ಪಟ್ಟಣ ಸುಂದರ ಮತ್ತು ಮಾದರಿಯಾಗಿ ಅಭಿವೃದ್ಧಿಪಡಿಸುವ ನನ್ನ ಕನಸಿಗೆ ಎಲ್ಲರೂ ಕೈಜೋಡಿಸಬೇಕು. ಹಿಂದಿನ ಅಧ್ಯಕ್ಷ ಬಸವರಾಜ ವಂಕೆ ಹಾಗೂ ಉಪಾಧ್ಯಕ್ಷೆ ರಾಜೇಶ್ವರಿ ಮೋರೆ ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅದೇ ರೀತಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಎಲ್ಲ ಸದಸ್ಯರು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬಸವರಾಜ ವಂಕೆ, ರಾಜೇಶ್ವರಿ ಮೋರೆ, ಮುಖ್ಯಾಧಿಕಾರಿ ಸ್ವಾಮಿದಾಸ ಹಾಗೂ ಎಲ್ಲ 23 ಸದಸ್ಯರು ಹಾಜರಿದ್ದರು.