ಗುಂಡ್ಲುಪೇಟೆ: ಭಾನುವಾರ ಮಧ್ಯಾಹ್ನ ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಬಿದ್ದ ಗಾಳಿ ಮಳೆಯಿಂದ ಮನೆಗಳು ಮತ್ತು ಬಾಳೆ ಬೆಳೆ ನೆಲಕಚ್ಚಿದ್ದು ಭಾರಿ ನಷ್ಟವುಂಟು ಮಾಡಿದೆ.
ತಾಲೂಕಿನ ತೆರಕಣಾಂಬಿ ಹೋಬಳಿಯ ಶೀಲವಂತಪುರ, ಸೋಮನಪುರ, ಕೊಡಸೋಗೆ, ಬೊಮ್ಮಲಾಪುರ, ಕಡತಾಳಕಟ್ಟೆಹುಂಡಿ ಮುಂತಾದ ಗ್ರಾಮಗಳಲ್ಲಿ ಜೋರಾಗಿ ಬೀಸಿದ ಗಾಳಿಗೆ ರೈತರ ಜಮೀನುಗಳಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಬಾಳೆ ಗಿಡಗಳು, ಮರಗಳು ನೆಲಕಚ್ಚಿದ ಪರಿಣಾಮ ಪ್ರತಿ ರೈತರಿಗೆ 2 ರಿಂದ 4 ಲಕ್ಷ ರೂ.ವರೆಗೆ ನಷ್ಟವುಂಟಾಗಿದೆ. ಸಾಲಸೋಲ ಮಾಡಿದ್ದ ಬೆಳೆ ನೆಲಕಚ್ಚಿದ್ದರಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸೋಮವಾರ ಬೆಳಗ್ಗೆ ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರತಿ ಜಮೀನುಗಳಿಗೆ ಹಾಗೂ ಜಖಂಗೊಂಡ ಮನೆಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ ನಷ್ಟದ ಅಂದಾಜು ದಾಖಲಿಸುತ್ತಿದ್ದಾರೆ. ಈ ಗ್ರಾಮಗಳಲ್ಲಿ ಜೋರಾಗಿ ಬೀಸಿದ ಗಾಳಿಗೆ 12 ಮನೆಗಳು ಭಾಗಶಃ ಜಖಂಗೊಂಡಿದ್ದರೆ, 275 ರಿಂದ 300 ಎಕರೆ ಜಮೀನುಗಳಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣ ನೆಲಕಚ್ಚಿದೆ. ತೋಟಗಾರಿಕೆ ಅಧಿಕಾರಿಗಳು ನಷ್ಟದ ಅಂದಾಜು ನಡೆಸಿ ವರದಿ ನೀಡಲಿದ್ದಾರೆ ಎಂದು ತೆರಕಣಾಂಬಿ ನಾಡಕಚೇರಿಯ ಕಂದಾಯಾಧಿಕಾರಿ ನಾಗೇಂದ್ರ ಮಾಹಿತಿ ನೀಡಿದ್ದಾರೆ.
ಶೀಲವಂತಪುರ ಮತ್ತು ಸೋಮನಪುರದಲ್ಲಿ 12 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರಿಂದ ಕೆಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು ಲೈನ್ ರಿಪೇರಿ ಮಾಡಲಾಗುತ್ತಿದೆ ಎಂದು ಬೊಮ್ಮಲಾಪುರ ಸೆಸ್ಕ್ ಇಂಜಿನಿಯರ್ ಮಯೂರ ವಿಜಯವಾಣಿಗೆ ತಿಳಿಸಿದ್ದಾರೆ.
ಸಂತ್ರಸ್ತರ ಜಮೀನುಗಳಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು.