ಜಿಲ್ಲೆ

ಭಾರಿ ಮಳೆಗೆ ಬೆಳೆ ಜಲಾವ್ರತ

Haveri

ಹಾವೇರಿ: ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಹಾಗೂ ಮಂಗಳವಾರ ಉತ್ತಮ ಮಳೆಯಾಗಿದ್ದು, ಹತ್ತಾರು ಎಕರೆ ಪ್ರದೇಶದಲ್ಲಿನ ಬೆಳೆ ಜಲಾವ್ರತಗೊಂಡಿವೆ. ಹಾನಗಲ್ಲ ತಾಲೂಕಿನ ಮಕರವಳ್ಳಿ ಮುಂತಾದ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಸೋಮವಾರ ರಾತ್ರಿ ಅಬ್ಬರಿಸಿತು. ರಾತ್ರಿಯಿಡಿ ಜಿಟಿಜಿಟಿ ಮಳೆ ಸುರಿದಿದ್ದು, ಮಂಗಳವಾರ ಬೆಳಗ್ಗೆ 10 ಗಂಟೆವರೆಗೂ ನಿರಂತರವಾಗಿ ಸುರಿದಿದೆ. ಇದರಿಂದ ಮೆಣಸಿನಕಾಯಿ, ಹತ್ತಿ, ಶೇಂಗಾ, ಗೋವಿನಜೋಳ ಮುಂತಾದ ಬೆಳೆಗಳು ಜಲಾವ್ರತಗೊಂಡಿವೆ. ತಾಲೂಕಿನ ಕೋಣನತಂಬಗಿ, ಹೊಸರಿತ್ತಿ, ಹಾಲಗಿ, ಮರೋಳ ಮುಂತಾದ ಗ್ರಾಮಗಳ ಹತ್ತಾರು ಎಕರೆ ಪ್ರದೇಶದಲ್ಲಿನ ಹೊಲಗಳು ನೀರು ತುಂಬಿ ಬೆಳೆ ಮುಳುಗಿವೆ. ಇದರಿಂದ ಲಕ್ಷಾಂತರ ರೂಪಾಯಿಗಳಷ್ಟು ಬೆಳೆ ನಷ್ಟವಾಗಿದೆ.

ಹಾನಗಲ್ಲ ತಾಲೂಕಿನಲ್ಲಿಯೂ ಮಳೆಯಿಂದ ಹಲವು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಮಕರವಳ್ಳಿ, ಕೊಪ್ಪರಸಿಕೊಪ್ಪ, ಹನುಮನಕೊಪ್ಪ ಮುಂತಾದ ಗ್ರಾಮಗಳ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ರಾಣೆಬೆನ್ನೂರ, ಬ್ಯಾಡಗಿ, ಹಿರೇಕೆರೂರ, ರಟ್ಟಿಹಳ್ಳಿ ಮತ್ತು ಹಾವೇರಿ ಭಾಗದಲ್ಲಿ ನಿರಂತರ ಮಳೆಯಿಂದ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ಬೆಳಗ್ಗೆ 10 ಗಂಟೆ ಬಳಿಕ ಮಳೆ ಬಿಡುವು ನೀಡಿದ್ದು, ಮಧ್ಯಾಹ್ನದ ಬಳಿಕ ಬಿಸಿಲು ಮೂಡಿದೆ. ಇದರಿಂದ ಹೆಚ್ಚಿನ ಅನಾಹುತ ಸೃಷ್ಟಿಯಾಗಿಲ್ಲ.

ಜುಲೈ ತಿಂಗಳಲ್ಲಿ ಬಿದ್ದ ಅತಿವೃಷ್ಟಿಯಿಂದ ಈಗಾಗಲೇ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಈಗ ಅಲ್ಪ ಮಳೆಯಾದರೂ ಕೆರೆ, ಹಳ್ಳಗಳಿಂದ ನೀರು ಹರಿದು ಹೊಲಗಳಿಗೆ ನುಗ್ಗುತ್ತಿವೆ. ಜಿಲ್ಲೆಯಲ್ಲಿ ತರಕಾರಿ ಬೆಳೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮೆಣಸಿನಕಾಯಿ, ಟೊಮ್ಯಾಟೊ ಬೆಳೆಗಳು ಕೊಳೆತಿವೆ. ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ.

ಮಳೆ ವಿವರ: ಹಾವೇರಿ ತಾಲೂಕಿನಲ್ಲಿ 32 ಮಿಮೀ, ರಾಣೆಬೆನ್ನೂರ 29, ಬ್ಯಾಡಗಿ 32.4, ಹಿರೇಕೆರೂರ 52.2, ರಟ್ಟಿಹಳ್ಳಿ 23.3, ಸವಣೂರ 22.2, ಶಿಗ್ಗಾಂವಿ 16.4 ಹಾಗೂ ಹಾನಗಲ್ಲ ತಾಲೂಕಿನಲ್ಲಿ 52.2ಮಿಮೀ ಮಳೆಯಾದ ವರದಿಯಾಗಿದೆ.