ಮಂಗಳೂರು: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 10.20 ಲಕ್ಷ ರೂ. ಮೌಲ್ಯದ 170 ಗ್ರಾಂ ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ಪತ್ತೆ ಮಾಡಿದ ಕೊಣಾಜೆ ಹಾಗೂ ಸಿಸಿಬಿ ಪೊಲೀಸರು, ಮೂವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಉಪ್ಪಳ ಗೇಟ್ ಬಳಿಯ ಮುಹಮ್ಮದ್ ಮುನಾಫ್ ಯಾನೆ ಮನಾಫ್(22), ಮುಹಮ್ಮದ್ ಮುಜಾಂಬಿಲ್ (24) ಮತ್ತು ಅಹ್ಮಮದ್ ಮಾಸೂಕ್(22)ಬಂಧಿತರು. ಆರೋಪಿಗಳು ಮಂಗಳೂರು ಮತ್ತು ಕೇರಳದಲ್ಲಿ ಮಾರಾಟ ಮಾಡಲು ಈ ಮಾದಕ ವಸ್ತುಗಳನ್ನು ಬೆಂಗಳೂರಿನಿಂದ ತಂದಿದ್ದರು. ಸಾಗಾಟಕ್ಕೆ ಬಳಸಿದ ಕಾರು, ನಾಲ್ಕು ಮೊಬೈಲ್ ಫೋನ್ ಸೇರಿದಂತೆ ಒಟ್ಟು 17,37,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಹಮ್ಮದ್ ಮುನಾಫ್ ಬಿಬಿಎ ವಿದ್ಯಾರ್ಥಿ, ಮುಹಮ್ಮದ್ ಮಸೂಕ್ ಸ್ಪೋರ್ಟ್ಸ್ ಶಾಪ್ ಹೊಂದಿದ್ದಾನೆ. ಇನ್ನೋರ್ವ ಆರೋಪಿ ಮುಹ್ಮಮದ್ ಮುಜಾಂಬಿಲ್ ಬೆಂಗಳೂರಿನ ಜೆಪಿ ನಗರದಲ್ಲಿ ಹೊಟೇಲೋಂದರಲ್ಲಿ ಕೆಲಸ ಮಾಡುತ್ತಿದ್ದ. ಕೊಣಾಜೆ ಠಾಣೆ ಪೊಲೀಸ್ ಉಪ ನಿರೀಕ್ಷಕ ಶರಣಪ್ಪ ಭಂಡಾರಿ ಅವರಿಗೆ ಡ್ರಗ್ಸ್ ಸಾಗಾಟ ಮಾಹಿತಿ ಲಭಿಸಿತು. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರಿಗೆ ಕಾರಿನಲ್ಲಿ ಬಂದಿದ್ದ ಆರೋಪಿಗಳನ್ನು ಕೊಣಾಜೆ ಠಾಣಾ ವ್ಯಾಪ್ತಿಯ ಮಂಗಳೂರು ವಿವಿ ಬಳಿ ಬಂಧಿಸಲಾಯಿತು. ಮಂಗಳೂರು ನಗರದಲ್ಲಿ ಇದೇ ಪ್ರಥಮ ಬಾರಿಗೆ ವಾಣಿಜ್ಯ ಪ್ರಮಾಣದ ದೊಡ್ಡ ಮೊತ್ತದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದನ್ನು ಆರೋಪಿಗಳು ಪ್ರತಿ ಗ್ರಾಂಗೆ 6 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ಎಸಿಪಿ ರಂಜಿತ್ ಕುಮಾರ್ ಇದ್ದರು.
ಆಫ್ರಿಕನ್ ಪ್ರಜೆಯಿಂದ ಖರೀದಿ: ಆರೋಪಿಗಳು ಆಫ್ರಿಕನ್ ಪ್ರಜೆಯಿಂದ ಈ ಎಂಡಿಎಂಎ ಖರೀದಿಸಿದ್ದರು ಎಂದು ಶಶಿಕುಮಾರ್ ಹೇಳಿದ್ದಾರೆ. ಕೇರಳ ಮತ್ತು ಕರ್ನಾಟಕದಲ್ಲಿ ಮಾರಾಟ ಮಾಡಲು ತಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ಎಂಡಿಎಂಎ ಅಷ್ಟೇ ಅಲ್ಲದೆ ಗಾಂಜಾ ಮಾರಾಟದಲ್ಲೂ ಸಕ್ರಿಯರಾಗಿದ್ದರು. ಆಫ್ರಿಕಾ ಪ್ರಜೆಯ ಮಾಹಿತಿ ಲಭ್ಯವಾಗಿದೆ. ಈ ಜಾಲದಲ್ಲಿ ಯಾರೆಲ್ಲ ಇದ್ದಾರೆ ಎಂದು ತಿಳಿಯಲು ತನಿಖಾ ತಂಡ ಬೆಂಗಳೂರಿಗೆ ತೆರಳಿದೆ. ಅಗತ್ಯವಿದ್ದಲ್ಲಿ ಬೆಂಗಳೂರು ಪೊಲೀಸರ ಸಹಕಾರ ಪಡೆಯಲಾಗುವುದು ಎಂದರು.