ಕೆ.ಆರ್.ಸಾಗರ: ಕೆ.ಆರ್.ಸಾಗರ ಗ್ರಾಮದ ವಿವಿಧೆಡೆ ಸೋಮವಾರ ಸುರಿದ ಮಳೆ, ಭಾರಿ ಗಾಳಿಗೆ ಗ್ರಾಮದ ಬಜಾರ್ ಲೈನ್, ತಲಕಾಡು ಫೈಲ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕೆಲ ಮನೆಗಳ ಛಾವಣಿ ಶಿಥಿಲಗೊಂಡು ಮನೆಯೊಳಗೆ ನೀರು ತುಂಬಿಕೊಂಡು ಜನರು ಪರದಾಡುವಂತಾಯಿತು.
ಬಜಾರ್ ಲೈನ್ ನಿವಾಸಿ ಸರಸ್ವತಿ ಎಂಬುವರ ಮನೆಯ ಛಾವಣಿ ಶೀಟುಗಳು ಹಾರಿಹೋಗಿ ಮನೆಯೊಳಗೆ ನೀರು ತುಂಬಿಕೊಂಡು ರಾತ್ರಿಯಿಡೀ ಪರದಾಡಿದರು. ಗಾಳಿಗೆ ಶೀಟುಗಳು ಹಾರಿ ಹೋಗಿದ್ದು ಮನೆಯಲ್ಲಿದ್ದ ದಿನಬಳಕೆ ವಸ್ತುಗಳು, ಟಿವಿ ಸೇರಿದಂತೆ ಇತರ ವಸ್ತುಗಳು ಹಾನಿಯಾಗಿವೆ.
ಸಮೀಪದ ಜಬ್ಬಾರ್ ಖಾನ್ ಎಂಬುವರ ಮನೆಯ ಹೆಂಚುಗಳು ಹಾರಿ ಹೋಗಿವೆ. ತಲಕಾಡು ಫೈಲ್ ನಿವಾಸಿ ಶೇಷಗಿರಿ ಎಂಬುವರ ಮನೆಯ ಮೇಲೆ ಮರದ ಕೊಂಬೆಗಳು ಬಿದ್ದು ಛಾವಣಿ ಶಿಥಿಲಗೊಂಡಿದೆ. ಸಮೀಪದ ಹೊಂಗಳ್ಳಿ ಗ್ರಾಮದ ಸಿದ್ದಮ್ಮ ಎಂಬುವರ ಮನೆಯ ಛಾವಣಿಗೆ ಹಾನಿಯಾಗಿದ್ದು, ಸದ್ಯ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಸ್ಥಳಕ್ಕೆ ಕೆ.ಆರ್.ಸಾಗರ ಗ್ರಾಪಂ ಪಿಡಿಒ ರಫೀಕ್, ಹುಲಿಕೆರೆ ಗ್ರಾಪಂ ಪಿಡಿಒ ನಟೇಶ್, ಗ್ರಾಪಂ ಸದಸ್ಯ ರವಿಕುಮಾರ್, ಮೂರ್ತಿ, ಗ್ರಾಮ ಲೆಕ್ಕಿಕಗರು ಭೇಟಿ ನೀಡಿ ಪರಿಶೀಲನೆ ನಡೆಸಿದರು.