ನಾಪೋಕ್ಲು: ಭಾಗಮಂಡಲದ ಚೇರಂಗಾಲದ ಬಳಿ ಜನವಸತಿ ಪ್ರದೇಶದ ಹತ್ತಿರ ಹತ್ತು ಅಡಿ ಉದ್ದದ ಭಾರಿ ಗಾತ್ರದ ಹೆಬ್ಬಾವನ್ನು ಉರಗ ತಜ್ಞ ಪೊನ್ನೀರ ಗಗನ್ ಸೆರೆ ಹಿಡಿದಿದ್ದಾರೆ.
ಚೇರಂಗಾಲದ ಜನವಸತಿ ಪ್ರದೇಶದ ರಾಮಯ್ಯ ಹಾಗೂ ಲವ ಎಂಬುವರ ಜಾಗದಲ್ಲಿ ಹೆಬ್ಬಾವು ಇರುವುದರ ಬಗ್ಗೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯಕ್ ಅವರು, ಪೊನ್ನೀರ ಗಗನ್ ಅವರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕಾಗಮಿಸಿದ ಪೊನ್ನೀರ ಗಗನ್, ಆಗಷ್ಟೇ ಯಾವುದೋ ಪ್ರಾಣಿಯನ್ನು ನುಂಗಿ ಪೊದೆ ನಡುವೆ ಇದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದರು.
ವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯಕ್ ಮಾತನಾಡಿ, ಹಾವುಗಳು ಕಾಣಿಸಿಕೊಂಡರೆ ಅವುಗಳನ್ನು ಕೊಲ್ಲದೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಿಂದ ಸೆರೆಹಿಡಿದ ಹೆಬ್ಬಾವನ್ನು ಪಟ್ಟಿಕಾಡು ರಕ್ಷಿತಾರಣ್ಯಕ್ಕೆ ಬಿಡಲಾಯಿತು.