ಚಿಕ್ಕಬಳ್ಳಾಪುರ: ಬೆಳ್ಳಂಬೆಳಗ್ಗೆ ಪಂಜಿನ ಮೆರವಣಿಗೆ, ಟೊಮ್ಯಾಟೊ ಬೀದಿಗೆ ಸುರಿದು ಆಕ್ರೋಶ, ಬೈಕ್ ರ‌್ಯಾಲಿ, ವಿವಿಧೆಡೆ ರಸ್ತೆ ಸಂಚಾರ ತಡೆ, ಅನ್ನದಾತರ ಹೋರಾಟಕ್ಕೆ ರಾಜಕೀಯ ಪಕ್ಷಗಳ ಸಾಥ್, ಮಧ್ಯಾಹ್ನದ ವರೆಗೂ ಬಂದ್ ಬಿಸಿ, ಬಳಿಕ ಎಂದಿನಂತೆ ಸಹಜ ಸ್ಥಿತಿ...
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ರೈತ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾ, ಅಖಿಲ ಭಾರತ ಕಿಸಾನ್ ಸಂಘರ್ಷ ಹೋರಾಟ ಸಮಿತಿ ನೇತೃತ್ವದಲ್ಲಿ ಕರೆ ನೀಡಿದ್ದ ಅಖಿಲ ಭಾರತ್ ಬಂದ್ ವೇಳೆ ಜಿಲ್ಲೆಯಲ್ಲಿ ಕಂಡು ಬಂದ ದೃಶ್ಯಗಳಿವು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ, ಪುಟ್ಟಣ್ಣಯ್ಯ ಬಣ) ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಕೂಲಿಕಾರರ ಸಂಘ, ಎಎಪಿ ಸೇರಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಪುಟ್ಟಣ್ಣಯ್ಯ ಬಣದ ರೈತರು ಜಿಲ್ಲಾ ಕೇಂದ್ರದ ವಾಪಸಂದ್ರದಿಂದ ಶಿಡ್ಲಘಟ್ಟ ವೃತ್ತದಲ್ಲಿ ಪಂಜಿನ ಮೆರವಣಿಗೆ ನಡೆಸಿದರೆ, ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು ಟೊಮ್ಯಾಟೊ ರಸ್ತೆಗೆ ಹಾಕಿ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಕಿಡಿಕಾರಿದರು. ಬಲಮುರಿ ವೃತ್ತ, ಬಜಾರ್ ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಧಿಕ್ಕಾರ ಕೂಗಿದರು.
ಮಧ್ಯಾಹ್ನದವರೆಗೆ ಅಂಗಡಿ, ಹೋಟೆಲ್, ಸಿನಿಮಾ ಮಂದಿರಗಳು ಬಾಗಿಲು ಮುಚ್ಚಿದ್ದವು. ಬಳಿಕ ಎಂದಿನಂತೆ ಕಾರ್ಯ ನಿರ್ವಹಿಸಿದವು. ಜನ ಮತ್ತು ವಾಹನ ಸಂಚಾರವು ನಿಧಾನವಾಗಿ ಹೆಚ್ಚಾಯಿತು. ಇದರ ನಡುವೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಪ್ರಮುಖ ವೃತ್ತಗಳಲ್ಲಿ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್ ತುಕಡಿ ನಿಯೋಜಿಸಲಾಗಿತ್ತು.
ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು: ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ, ಈಗಲಾದರೂ ಕಾಯ್ದೆಗಳನ್ನು ಹಿಂಪಡೆಯಬೇಕು, ಇಲ್ಲದಿದ್ದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ರೈತಸಂಘ ಮತ್ತು ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಎಚ್ಚರಿಕೆ ನೀಡಿದರು. ನಗರದ ಶಿಡ್ಲಘಟ್ಟ ವೃತ್ತದಲ್ಲಿ ಮಾತನಾಡಿ, ಭೂ ಸುಧಾರಣೆ, ಎಪಿಎಂಸಿ, ಬಿತ್ತನೆ ಬೀಜ ಮಾರಾಟ, ವಿದ್ಯುತ್ ಖಾಸಗೀಕರಣ ಕಾಯ್ದೆಗಳ ತಿದ್ದುಪಡಿ ಹಾಗೂ ಜಾರಿ ವಿರೋಧಿಸಿ ದೇಶದಾದ್ಯಂತ ಆಂದೋಲನ ನಡೆಯಲಿದೆ ಎಂದರು. ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ನಿಲ್ಲುವುದಿಲ್ಲ ಎಂದು ಜಿಲ್ಲಾ ಪುಟ್ಟಣ್ಣಯ್ಯ ಬಣದ ಅಧ್ಯಕ್ಷ ಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ ಹೇಳಿದರು. ಕೋಡಿಹಳ್ಳಿ ಚಂದ್ರಶೇಖರ್ ಬಣದ ಅಧ್ಯಕ್ಷ ಎಚ್.ವಿ.ರಾಮನಾಥ್, ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ರೈತ ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಮಕೃಷ್ಣಪ್ಪ ಮತ್ತಿತರರು ಇದ್ದರು.