ಸಾಗರ: ದೇಶವಾಸಿಗಳನ್ನು ಜಾಗೃತಿಗೊಳಿಸುವ ಮತ್ತು ಸದೃಢ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಗಾಂಧಿ ಮಂದಿರದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ನೆನಪಿನಾರ್ಥ ಕಾರ್ಯಕರ್ತರಿಗೆ ಸಸಿ ವಿತರಿಸಿ ಮಾತನಾಡಿ, ಪ್ರತಿಯೊಬ್ಬರೂ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಭವಿಷ್ಯ ಭಾರತವನ್ನು ಜಾತ್ಯತೀತವಾಗಿ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು ಎಂದರು.
ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಪಾದಯಾತ್ರೆಯಲ್ಲಿ ಸಾಗರದಿಂದ 2 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುತ್ತಿದ್ದಾರೆ. ಪ್ರಸ್ತುತ ದೇಶವನ್ನು ಕೋಮು ಹಿನ್ನೆಲೆಯಲ್ಲಿ ಒಡೆಯುವ ಕೆಲಸ ಮಾಡಲಾಗುತ್ತಿದ್ದು ಭಾರತೀಯರೆಲ್ಲ ಒಂದೇ ಎನ್ನುವ ಘೋಷವಾಕ್ಯ ಈ ಪಾದಯಾತ್ರೆ ಮೂಲಕ ಹೊರಹೊಮ್ಮಲಿದೆ ಎಂದರು.
ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮೂಲಕ 3070 ಕಿ.ಮೀ. 150 ದಿನ ನಡೆಯಲಿದ್ದಾರೆ. ಪಕ್ಷ ಸಂಘಟನೆ ಜತೆಗೆ ಜನರನ್ನು ಒಗ್ಗೂಡಿಸುವುದು, ನಿರುದ್ಯೋಗ ಸಮಸ್ಯೆ ಬಗೆಹರಿಸುವುದು, ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ, ರೈತ ಸುರಕ್ಷತೆಗೆ ಬೇಕಾದ ಕಾಯ್ದೆ ಜಾರಿಗೆ ತರುವುದು ಸೇರಿದಂತೆ ಅನೇಕ ಉದ್ದೇಶ ಹೊಂದಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಹೇಳಿದರು. ಪಾದಯಾತ್ರೆ ಮೂಲಕ ಜನರ ಸಮಸ್ಯೆಗಳನ್ನು ಕೇಳಿ ಅದಕ್ಕೆ ಪರಿಹಾರ ಕಲ್ಪಿಸುವ ಕೆಲಸ ರಾಹುಲ್ ಗಾಂಧಿಯವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.