ಜಿಲ್ಲೆ

ಭಾರತ್ ಜೋಡೋ ಪಾದಯಾತ್ರೆ ವೇಳೆ ಅಪಘಾತದಲ್ಲಿ ಮೃತಪಟ್ಟ ರಮೇಶ್ ಕುಟುಂಬಕ್ಕೆ ಕಾಂಗ್ರೆಸ್ ನೆರವು; 10 ಲಕ್ಷದ ಚೆಕ್ ಹಸ್ತಾಂತರಿಸಿದ ಡಿಕೆಶಿ

ತ್ಯಾಗರ್ತಿ: ಬರಲಿರುವ ದಿನಗಳಲ್ಲಿ ರಾಜ್ಯ ಮತ್ತು ದೇಶದಲ್ಲಿ ಮಹತ್ತರ ಬದಲಾವಣೆ ಕಾಣಲಿದ್ದೀರಿ. ಇದು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಸಮಯ ಅಲ್ಲ, ಹೋರಾಟದ ಮೂಲಕ ರಾಜ್ಯದ ಜನರ ಹೃದಯ ಗೆಲ್ಲಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಕಾರ್ಯಕರ್ತರಿಗೆ ಹೇಳಿದರು.

ಭಾರತ್ ಜೊಡೋ ಯಾತ್ರೆ ವೇಳೆ ಹಿರಿಯೂರು ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಹುತ್ತದಿಂಬ ಗ್ರಾಮದ ಎಂ.ಎಲ್. ರಮೇಶ್ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಜೀವಿತಾವಧಿಯಲ್ಲಿ ನಾವು ಮಾಡುವ ಕೆಲಸ ಸಮಾಜ ನೆನಪಿಡುವಂತಿರಬೇಕು. ರಮೇಶ್ ಸಾವು ಸಮಾಜದ ನೆನಪಿನಲ್ಲಿರುತ್ತದೆ ಎಂದರು.

ಅರಣ್ಯಭೂಮಿ ಹಕ್ಕು, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಸೇರಿದಂತೆ ಮಲೆನಾಡಿನ ಜ್ವಲಂತ ಸಮಸ್ಯೆಗಳನ್ನು ಪಕ್ಷದ ಪ್ರಮುಖರು ಗಮನಕ್ಕೆ ತಂದಿದ್ದಾರೆ. ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ, ಹೋರಾಟದ ಮೂಲಕ ಮುಂದಿನ ದಿನಗಳಲ್ಲಿ ಜನರ ಹೃದಯ ಗೆಲ್ಲುವ ಪ್ರಯತ್ನ ಮಾಡೋಣ ಎಂದರು.

ರಮೇಶ್ ಅವರದ್ದು ಸಾವಲ್ಲ. ಅದು ದೇಶಸೇವೆಗೆ ಸಮರ್ಪಣೆಯಾದ ಜೀವ. ಪ್ರಮುಖ ಐದು ಅಂಶಗಳನ್ನು ಇರಿಸಿಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಹುತ್ತದಿಂಬ ಕಾಂಗ್ರೆಸ್ ಬೂತ್ ಅಧ್ಯಕ್ಷ ರಮೇಶ್ ಪಾಲ್ಗೊಳ್ಳುವ ಮೂಲಕ ದೇಶಸೇವೆ ಮಾಡಿದ್ದಾರೆ. ಅಂತಹ ತ್ಯಾಗಿಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುವುದು ನಮ್ಮ ಆದ್ಯ ಕರ್ತವ್ಯ. ರಾಜಕಾರಣಕ್ಕಿಂತ ಮಾನವೀಯತೆ, ಮಾನವ ಧರ್ಮ, ಉಪಕಾರ ಸ್ಮರಣೆ ಮುಖ್ಯ. ಮೃತ ರಮೇಶ್ ಕುಟುಂಬದ ಜೊತೆ ಪಕ್ಷ ಇರಲಿದೆ ಎಂದು ಅಭಯ ನೀಡಿದರು.

ಪರಿಹಾರ ಮೊತ್ತ ಹೆಚ್ಚಳ: ರಮೇಶ್ ಅವರು ಅಸುನೀಗಿದ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಾಗ ಪಕ್ಷದಿಂದ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಈಗ ಪರಿಹಾರ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.