ಯಳಂದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 
ಜಿಲ್ಲೆ

ಭಾರತ್ ಜೋಡೋ ಅಭಿಯಾನಕ್ಕೆ ಮತ್ತಷ್ಟು ಬಲ ತುಂಬಬೇಕು

ಯಳಂದೂರು: ಭಾರತ್ ಜೋಡೋ ಅಭಿಯಾನಕ್ಕೆ ಪಕ್ಷದ ಕಾರ್ಯಕರ್ತರು ಮತ್ತಷ್ಟು ಬಲ ತುಂಬಬೇಕು ಎಂದು ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಭಾರತ್ ಜೋಡೋ ಅಭಿಯಾನ ಸೆ. 30ರಂದು ಕೇರಳದಿಂದ ಕರ್ನಾಟಕದ ಗಡಿ ಪ್ರವೇಶಿಸಿ ಗುಂಡ್ಲುಪೇಟೆಗೆ ಆಗಮಿಸಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸೆ.14ರ ಬುಧವಾರ ಕೊಳ್ಳೇಗಾಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಲಿದ್ದಾರೆ. ಈ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲ ಚುನಾಯಿತ ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಕರ್ನಾಟಕದ ಗಡಿ ಪ್ರವೇಶಿಸುವ ಈ ಯಾತ್ರೆಗೆ ನಾವು ಅದ್ಧೂರಿ ಸ್ವಾಗತವನ್ನು ಕೋರಲಿದ್ದು ಇಲ್ಲಿಂದ ನಿರ್ಗಮಿಸುವವರೆಗೂ ಜತೆಯಲ್ಲೇ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ ಮಾಜಿ ಶಾಸಕರಾದ ಎಸ್.ಜಯಣ್ಣ, ಎಸ್.ಬಾಲರಾಜು, ಪಕ್ಷದ ಜಿಲ್ಲಾಧ್ಯಕ್ಷರು, ಮಂಚೂಣಿಯ ನಾಯಕರು, ಕಾರ್ಯಕರ್ತರ ಪಡೆ ಈಗಾಗಲೇ ಜಿಲ್ಲಾದ್ಯಂತ ಸಮರೋಪಾದಿಯಲ್ಲಿ ಕೆಲಸಗಳನ್ನು ಆರಂಭಿಸಿದ್ದಾರೆ ಎಂದು ತಿಳಿಸಿದರು.

ಭಾರತ್ ಜೋಡೋ ಯಾತ್ರೆಗೆ ಅನೇಕ ರೂಪುರೇಷೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಲಹೆ ನೀಡಬೇಕು. ಪ್ರತಿ ಗ್ರಾಮಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದ್ದು ಪ್ರತಿಯೊಬ್ಬರೂ ಇದಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ವಡಗೆರೆದಾಸ್ ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಂಜು, ಬಿ. ರವಿ, ಕೆ. ಮಲ್ಲಯ್ಯ ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಮುಖಂಡರಾದ ರಾಜಶೇಖರ್, ಮಲ್ಲು, ನಿಂಗರಾಜು, ಪ್ರಕಾಶ್, ಮುನವ್ವರ್‌ಬೇಗ್, ಅಸ್ಲಂಪಾಷ, ಯರಗಂಬಳ್ಳಿ ಮಲ್ಲು, ನಾಗೇಂದ್ರ, ಮಹೇಶ್ ಸೇರಿದಂತೆ ಅನೇಕರು ಇದ್ದರು.