ಮೈಸೂರು: ನಗರದ ಭಾರತ್ ಆಸ್ಪತ್ರೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಸಂಸ್ಥೆಯಲ್ಲಿ ಸುಧಾರಿತ ರೊಬಾಟಿಕ್ ಸರ್ಜರಿ ತಂತ್ರಜ್ಞಾನ ಅನಾವರಣಗೊಳಿಸಲಾಗಿದೆ.
ಇಲ್ಲಿ ಅತ್ಯಾಧುನಿಕ ಡಾಮಿನ್ಸಿ ‘ರೊಬೋಟಿಕ್ ಸರ್ಜಿಕಲ್ ಸಿಸ್ಟ್‌ಂ’ ಪರಿಚಯಿಸಲಾಗಿದೆ. ಮೈಸೂರಿನಲ್ಲೇ ಮೊದಲ ಆರೋಗ್ಯ ಸೌಲಭ್ಯ ಇದಾಗಿದೆ. ಶಸ್ತ್ರಚಿಕಿತ್ಸಾ ಫಲಿತಾಂಶವನ್ನು ಗಣನೀಯವಾಗಿ ಹೆಚ್ಚಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ ಎಂದು ವಿಕಿರಣ ಮತ್ತು ವೈದ್ಯಕೀಯ ಆಂಕೊಲಾಜಿಸ್ಟ್, ಎಚ್‌ಸಿಜಿಯ ಕಾರ್ಯನಿರ್ವಾಹಕ ಅಧ್ಯಕ್ಷ್ಷ, ಬಿಎಚ್‌ಐಒ ಅಧ್ಯಕ್ಷ ಡಾ.ಬಿ.ಎಸ್.ಅಜಯಕುಮಾರ್ ತಿಳಿಸಿದರು.
ಹೊಸ ಸೌಲಭ್ಯಕ್ಕೆ ಶನಿವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾಮಿನ್ಸಿ ವ್ಯವಸ್ಥೆಯಿಂದ ರೋಗಿಗಳಿಗೆ ಕಡಿಮೆ ನೋವು, ಕಡಿಮೆ ಗಾಯ, ಕಡಿಮೆ ರಕ್ತದ ನಷ್ಟವಾಗಲಿದ್ದು, ಆಸ್ಪತ್ರೆಯಿಂದ 3-4 ದಿನದಲ್ಲೇ ಮನೆಗೆ ಹೋಗುವುದು ಸೇರಿದಂತೆ ಹಲವಾರು ಪ್ರಯೋಜನ ಪಡೆಯಬಹುದು.
ಶಸ್ತ್ರಚಿಕಿತ್ಸೆಯನ್ನು ನಿಖರವಾಗಿ ನಡೆಸಿ ರೋಗಿಯ ಚೇತರಿಕೆಯ ಪ್ರಕ್ರಿಯೆ ತ್ವರಿತಗೊಳಿಸಬಹುದು. ಮುಖ್ಯವಾಗಿ ರೋಗಿಗಳು ತಮ್ಮ ದೈನಂದಿನ ಜೀವನಕ್ಕೆ ಹೆಚ್ಚು ವೇಗವಾಗಿ ಮರಳಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಸಾಮಾನ್ಯ ಶಸ್ತ್ರಚಿಕಿತ್ಸೆ ಬಳಿಕ 15 ದಿನಗಳ ಕಾಲ ರೋಗಿ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಸಾಮಾನ್ಯ ಕಣ್ಣಿಗೆ ಕಾಣದ ದೇಹದೊಳಗಿನ ಅನಗತ್ಯ ಅಂಗವನ್ನು ಈ ವ್ಯವಸ್ಥೆ ಮೂಲಕ ಸುಲಭವಾಗಿ ತೆರವುಗೊಳಿಸಬಹುದು. ಅಷ್ಟರ ಮಟ್ಟಿಗೆ ನಿಖರತೆ ಈ ವ್ಯವಸ್ಥೆಯಿಂದ ಸಾಧ್ಯ. ಇದು ರೋಗಿಗಳಿಗೆ ಕ್ಲಿನಿಕಲ್ ಫಲಿತಾಂಶ ಒದಗಿಸುತ್ತದೆ.
ಶಸ್ತ್ರಚಿಕಿತ್ಸಾ ಫಲಿತಾಂಶ ಮಾತ್ರವಲ್ಲದೆ ಅವರ ಒಟ್ಟಾರೆ ಜೀವನದ ಗುಣಮಟ್ಟವನ್ನೂ ಸುಧಾರಿಸುತ್ತದೆ ಎಂದು ಹೇಳಿದರು.
ರೊಬಾಟಿಕ್ ಶಸ್ತ್ರಚಿಕಿತ್ಸಕರಾದ ಡಾ.ವಿಜಯ್‌ಕುಮಾರ್ ಮತ್ತು ಡಾ.ರಕ್ಷಿತ್ ಶೃಂಗೇರಿ ಸೇರಿದಂತೆ ತಜ್ಞ ಶಸ್ತ್ರಚಿಕಿತ್ಸಕರ ಮಾರ್ಗದರ್ಶನದಲ್ಲಿ ಭಾರತ್ ಆಸ್ಪತ್ರೆಯು ರೊಬಾಟಿಕ್ ಸರ್ಜರಿ ಮೂಲಕ ಮೈಸೂರು ಪ್ರದೇಶದ ರೋಗಿಗಳಿಗೆ ಸುಧಾರಿತ ಶಸ್ತ್ರಚಿಕಿತ್ಸಾ ಆರೈಕೆಯನ್ನು ನೀಡುವ ಗುರಿ ಹೊಂದಿದೆ ಎಂದು ಒತ್ತಿ ಹೇಳಿದರು.
ಸಂಸ್ಥೆಯ ರೊಬಾಟಿಕ್ ಸರ್ಜನ್ ಡಾ.ರಕ್ಷಿತ್ ಶೃಂಗೇರಿ ಮಾತನಾಡಿ, ಆಧುನಿಕ ರೊಬೋಟಿಕ್ ಶಸ್ತ್ರಚಿಕಿತ್ಸೆಯು ಸಾಂಪ್ರದಾಯಿಕ ಶಸ್ತ್ರಚಿಕಿತ್ಸಾ ವಿಧಾನಗಳಿಗಿಂತ ರೋಗಿಯು ತ್ವರಿತವಾಗಿ ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ನಮ್ಮ ಸಂಸ್ಥೆಯಲ್ಲಿ ಆರಂಭದಲ್ಲಿ ಆಂಕೊಲಾಜಿ, ಸ್ತ್ರಿರೋಗ ಶಾಸ್ತ್ರ, ಮೂತ್ರಶಾಸ್ತ್ರ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸೆ ಇತ್ತು. ಇದೀಗ ರೊಬಾಟಿಕ್ ಸರ್ಜರಿ ಪರಿಚಯಿಸಲಾಗಿದೆ ಎಂದು ಹೇಳಿದರು.
ರೊಬಾಟಿಕ್ ಶಸ್ತ್ರಚಿಕಿತ್ಸಕ ಡಾ.ವಿಜಯ್‌ಕುಮಾರ್ ಮಾತನಾಡಿ, ರೊಬಾಟಿಕ್ ತಂತ್ರಜ್ಞಾನ ಮೈಸೂರಿನ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಜತೆಗೆ ಉಜ್ವಲ, ಆರೋಗ್ಯಕರ ಭವಿಷ್ಯದ ಭರವಸೆ ನೀಡುತ್ತದೆ. ಈ ಸರ್ಜರಿ ನಾವೀನ್ಯತೆ ಮತ್ತು ಶ್ರೇಷ್ಠತೆ, ಬದ್ಧತೆಗೆ ಸಾಕ್ಷಿಯಾಗಿದೆ. ರೋಗಿಗಳಿಗೆ ಅತ್ಯಾಧುನಿಕ ಹಾಗೂ ಗುಣಮಟ್ಟದ ಸೇವೆ ದೊರೆಯಲಿದೆ ಎಂದರು.
ಆಸ್ಪತ್ರೆಯ ಸೀನಿಯರ್ ರೇಡಿಯೇಶನ್ ಅಂಕೊಲಜಿಸ್ಟ್ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್.ಮಾಧವಿ, ಸಿಒಒ ಗೌತಮ್ ಧರ್ಮೇಲಾ ಇದ್ದರು.