ಬಾಗಲಕೋಟೆ: ಬ್ರಿಟಿಷರು ಪುಸ್ತಕ ಜ್ಞಾನಿಗಳಾದರೆ ಭಾರತೀಯರು ಮಸ್ತಕ ಜ್ಞಾನಿಗಳು, ಸಂವಿಧಾನ ಹಾಗೂ ನೈತಿಕ ಶಿಕ್ಷಣದ ಮೂಲ ತತ್ವಗಳನ್ನು ಜನಪದ ನಮಗೆ ಕಲಿಸುತ್ತದೆ. ಜನಪದರು ಬರೆಯದೆ ಜ್ಞಾನಿಗಳು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಹಸ್ತçಪ್ರತಿ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಹೇಳಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಯಲಾಟ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷರದ್ದು ಪುಸ್ತಕ ಜ್ಞಾನ, ಭಾರತೀಯರದ್ದು ಮಸ್ತಕ ಜ್ಞಾನ, ಒಬ್ಬ ಬ್ರೀಟಿಷ ಇಂಗ್ಲೀಷ ಕವಿ ಸತ್ತರೆ ಒಂದು ಪುಸ್ತಕ ಉಳಿಯುತ್ತದೆ. ನಮ್ಮ ಭಾರತೀಯ ಕಲಾವಿದ ತೀರಿಕೊಂಡರೆ ಆ ಕಲಾ ಪರಂಪರೆ ನಾಶವಾಗುತ್ತದೆ. ಅದಕ್ಕೆ ಮಸ್ತಕ ವಿದ್ಯೆ ಎಂದು ಕರೆಯುತ್ತೇವೆ ಎಂದರು.
ಇದು ಅನುಭವದ ವಿದ್ಯೆ, ತಿಳಿಯುವುದರಿಂದ ಬರುವಂತಹದ್ದು, ಮಾಡುವುದರಿಂದ ನೋಡುವುದರಿಂದ ಬರುವಂತ ಕಲೆ, ಹಿಂದೆ ನಮಗೆ ಶಾಲೆಯಲ್ಲಿ ಮಾಡಿ ಕಲಿ ನೋಡಿ ತಿಳಿ ಎನ್ನುತ್ತಿದ್ದರು. ನಮ್ಮ ಕಲೆಗಳು ಎಂದರೆ ನೋಡಿ ತಿಳಿದುಕೊಂಡು ಆಡುವಂತದ್ದು, ಹೀಗಾಗಿ ಜನಪದ ಕಲಾವಿದರು ಅನಕ್ಷರಸ್ಥರು ಎಂದು ಭಾವಿಸಬಾರದು. ಅವರು ಹಾಡಿರುವ ಬರೆದಿರುವ ತ್ರೀಪದಿ, ಒಡಪುಗಳು ಕಾವ್ಯಗಳನ್ನು ಹಾಗೂ ಜನಪದರು ಆಡಿದ ಮಾತುಗಳನ್ನು ತರಗತಿಯಲ್ಲಿ ಬಿಡಸಲು ಆಗದೆ ಇರುವಷ್ಟು ಮಟ್ಟಿಗೆ ಅವು ಇರುವುದರಿಂದ ನಮ್ಮ ಕಲಾವಿದರು ಅನಕ್ಷರಸ್ಥರಲ್ಲಾ. ಅವರು ಬರೆಯದೆ ಜ್ಞಾನಿಗಳು. ಮುಂದಿನ ೧೦ ವರ್ಷ ಕಳೆದರೆ ಬಯಲಾಟ ಪಾರಿಜಾತ ಕಲಾವಿದರು ಸಿಗುವುದಿಲ್ಲಾ ಎಂದು ಕಳವಳ ವ್ಯಕ್ತಪಡಿಸಿದರು.
ಈಗಿನ ತಲೆಮಾರು ಹೋದರೆ ಬಯಲಾಟ ಕಲೆಯು ಮಾಸಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಪಾರಿಜಾತ ಈ ಭಾಗದ ಬಹಳ ಅಪರೂಪ ಪ್ರಸಿದ್ದವಾಗಿರತಕ್ಕಂತ ಮತ್ತು ಜನಪ್ರೀಯವಾಗಿರುವ ಒಂದು ಆಟ. ಇಲ್ಲಿ ಕೃಷ್ಣ ರುಕ್ಮಣಿ ಸತ್ಯಭಾಮೆ ಕೋರವಂಜಿ ಪಾತ್ರಗಳು ಇಡಿ ಕಥೆ ವಸ್ತು ಇಬ್ಬರ ಹೆಂಡಿರ ಜಗಳ. ಪಾರಿಜಾತ ಅಥವಾ ಬಯಲಾಟ ಈ ಜನಪದ ಕಲೆಗಳು ನಮಗೆ ಕಲಿಸುವುದೆನೆಂದರೆ ವಿನಯ, ಮಾನವೀಯತೆ, ನಿರ್ಮಲ ಪ್ರೇಮ, ನಿರ್ಮಲ ಭಕ್ತಿ, ಕೂಡಿ ಆಟ ಊಟ ಮಾಡುವುದು ಹೇಗೆ ಮಾತನಾಡುವುದು ಹೇಗೆ ಯಾವುದು ಸಂವಿಧಾನದ ಮೂಲ ತತ್ವಗಳು ಎಂದು ಕರೆಯುತ್ತವೆಯೋ, ನೈತಿಕ ಶಿಕ್ಷಣದ ಮೂಲ ತತ್ವ ಎಂದು ಕರೆಯುತ್ತೆವೆಯೋ ಯಾವುದನ್ನು ತರಗತಿಯಲ್ಲಿ ಕಲಿಸುತ್ತೇವೆ. ಅವೆಲ್ಲವನ್ನು ಕಲಿಸಿಕೊಟ್ಟಿದ್ದು ಜನಪದ ಸಂಸ್ಕೃತಿ, ನಮಗೆ ನೀತಿ ಸಂಸ್ಕಾರ ಕಲಿಸಿಕೊಡುತ್ತದೆ ಎಂದು ಹೇಳಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್.ದುರ್ಗಾದಾಸ್ ಮಾತನಾಡಿ, ನಮ್ಮಲಿರುವ ಅಹಂಕಾರವನ್ನು ಕಳೆದುಕೊಂಡು ಎಲ್ಲರ ಜೊತೆಗೆ ಕೂಡಿಕೊಂಡು ಜನಸಾಮನ್ಯರಂತೆ ಬದುಕುವುದೆ ಜನಪದಗಳ ಆಶಯವಾಗಿದೆ. ದೇವಲೋಕದ ಪಾತ್ರಗಳನ್ನು ಭೂಲೋಕದ ಅಟ್ಟಕ್ಕೆ ಕರೆದುಕೊಂಡು ಮಾತನಾಡಿಸುತ್ತಾರೆ. ಇದು ಜನಪದ ಆಟಗಳ ದೊಡ್ಡ ಹಿರಿಮೆ, ಜನರಿಗೆ ಲೋಕದ ನೀತಿಗಳನ್ನು ತಿಳಿಸುತ್ತಾ ಬಂದಿದ್ದು, ಜನಪದ ಕಲೆಗಳ ಒಂದು ಬಹುದೊಡ್ಡ ಶಕ್ತಿ ಎಂದರು.
ಕಾರ್ಯಕ್ರಮದಲ್ಲಿ ಜನಪದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಜೀಮೂತ ವಾಹನ ಬಯಲಾಟ ಪ್ರದರ್ಶನ ಹಾಗೂ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ ಜರುಗಿದವು. ಕಾರ್ಯಕ್ರಮಕ್ಕೂ ಮುಂಚೆ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕುಂಭ ಮೆರವಣಿಗೆ ಜರುಗಿತು.
ಅಕಾಡಮಿ ಸದಸ್ಯೆ ಅನಸೂಯಾ ವಡ್ಡರ, ಕಾಲೇಜಿನ ಪ್ರಾಚಾರ್ಯ ಗೀತಾಂಜಲಿ ಶ್ರೀನಿವಾಸ ರಾವ, ಸಂಸ್ಕೃತಿ ವಿಭಾಗದ ಮುಖ್ಯಸ್ಥ ಡಾ.ಮೌನೇಶ ಕಮ್ಮಾರ, ಪ್ರವೀಣ ಬಿ, ಜಾಜಿಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ, ಸುನೀಲ ನಡಕಟ್ಟಿ, ಡಾ.ಎಂ.ಎಚ್.ತಹಸೀಲ್ದಾರ. ಡಾ. ಕವಿತಾ ಮುತ್ತಪ್ಪ, ಸಂಗಮೇಶ ಬ್ಯಾಳಿ, ಚಂದ್ರಶೇಖರ ಕಾಳನ್ನವರ, ಪಿ.ಕೆ ಕಾರಬಾರಿ ಇತರರು ಇದ್ದರು.