ಜಿಲ್ಲೆ

'ಭಾರತೀಯರ ಕೈಯಲ್ಲಿ ಜಾಗತಿಕ ಕಂಪನಿಗಳ ಚುಕ್ಕಾಣಿ'

ಮೈಸೂರು: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವು ಮುಂಚೂಣಿಯಲ್ಲಿದ್ದು, ವಿದ್ಯಾರ್ಥಿಗಳು ಇಸ್ರೋ, ಡಿಆರ್‌ಡಿಒ ಸೇರಿದಂತೆ ಅಗ್ರಮಾನ್ಯ ಸಂಸ್ಥೆಗಳ ಸೇವೆಗೆ ಸೇರಲು ಮುಂದಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್.ಶೈಲಜಾ ಸಲಹೆ ನೀಡಿದರು.
ಮಾನಸಗಂಗೋತ್ರಿ ಆವರಣದಲ್ಲಿರುವ ಸ್ಕೂಲ್ ಆಫ್ ಇಂಜಿನಿಯರಿಂಗ್ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಅಮ್ಯೂಸ್ 2ಕೆ23 ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್, ವೈದ್ಯ ವಿಭಾಗಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನದಲ್ಲಿ ದೇಶ ಹಲವು ಪ್ರಗತಿ ಸಾಧಿಸಿದ್ದು ವಿದ್ಯಾರ್ಥಿಗಳು ಇಸ್ರೋ, ಡಿಆರ್‌ಡಿಒ ಸೇರಿದಂತೆ ಇನ್ನೂ ಅನೇಕ ಸಂಸ್ಥೆಗಳನ್ನು ಸೇರುವತ್ತ ಗಮನ ನೀಡಬೇಕು. ಆ ಮೂಲಕ ತಮ್ಮ ಗುರಿ ಸಾಧನೆ ಮಾಡಬೇಕು ಎಂದು ಹೇಳಿದರು.
ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಛಾಪು ಮೂಡಿಸಬೇಕು. ಸಿನಿಮಾ, ರಂಗಕಲೆ, ವನ್ಯಜೀವಿ ಛಾಯಾಗ್ರಹಣ ಸೇರಿದಂತೆ ಸೃಜನಶೀಲ ಕ್ಷೇತ್ರಗಳ ಹಿನ್ನೆಲೆಯಿಂದ ಬಂದವರು ಅಗ್ರಮಾನ್ಯ ಸಾಧನೆ ಮಾಡಿದ್ದಾರೆ. ಕಲೆಯು ಯಾರೊಬ್ಬರನ್ನು ಕೈ ಬಿಡುವುದಿಲ್ಲ. ಹೀಗಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಇನ್ಫೋಸಿಸ್‌ನ ಸುಧಾಮೂರ್ತಿ ಅವರು ಇಂಜಿನಿಯರಿಂಗ್ ಮಾಡಿದ್ದರೂ, ಸಾಹಿತ್ಯ ಹಾಗೂ ಸೇವಾ ಕ್ಷೇತ್ರದಲ್ಲಿ ನಾಡಿಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಭಾರತದ ಪ್ರತಿಭಾವಂತರು ಜಾಗತಿಕ ಅಗ್ರಮಾನ್ಯ ಕಂಪನಿಗಳ ಚುಕ್ಕಾಣಿ ಹಿಡಿದಿದ್ದಾರೆ. ಮೈಕ್ರೊಸ್ಟಾಫ್‌ನ ಸತ್ಯ ನದೆಲ್ಲ, ಗೂಗಲ್‌ನ ಸುಂದರ್ ಪಿಚೈ ಸೇರಿದಂತೆ ಅನೇಕರು ಸಾಧನೆಯ ಶಿಖರವೇರಿದ್ದಾರೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ.ಬಿ.ಶಂಕರ್ ಮಾತನಾಡಿ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳು ಹೆಚ್ಚಿದ್ದರಷ್ಟೇ ಸಾಲದು, ಪ್ರತಿಭೆಯೂ ಇರಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಂಡ ನಂತರ ಜಾಗತಿಕ ಕೋರ್ಸ್‌ಗಳನ್ನು ವಿಶ್ವವಿದ್ಯಾಲಯದಲ್ಲಿ ತರಲಾಗಿದೆ. ರೊಬೊಟಿಕ್, ಆರ್ಕಿಟೆಕ್ಚರ್, ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ಹಲವು ವಿಷಯಗಳನ್ನು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಕೂಲ್ ಆಫ್ ಇಂಜಿನಿಯರಿಂಗ್ ನಿರ್ದೇಶಕ ಡಾ.ಟಿ.ಅನಂತಪದ್ಮನಾಭ, ಸಂಯೋಜಕರಾದ ಡಾ.ಸಿ.ಸುನೀಲ್, ಡಾ.ಟಿ.ಎಂ.ಪ್ರದೀಪ್ ಇದ್ದರು.