ಜಿಲ್ಲೆ

ಭಾರತೀಯನ ಕೈಹಿಡಿದ ಅಮೆರಿಕಾ ಯುವತಿ

ಚಿತ್ರದುರ್ಗ: ಅಮೆರಿಕಾ ಯುವತಿ ಭಾರತೀಯ ಯುವಕ ಇಬ್ಬರೂ ಪರಸ್ಪರ ಪ್ರೀತಿಸಿದ್ದು, ನಗರದ ಜಿ.ಜಿ.ಸಮುದಾಯ ಭವನದಲ್ಲಿ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಸೀರೆಯುಟ್ಟು, ಕಾಲುಂಗುರು ತೊಟ್ಟು, ಮೆಹೆಂದಿಯೊಂದಿಗೆ ಹಸೆಮಣೆ ಏರಿದ ಅಮೆರಿಕಾ ಮೂಲದ ವಧು ಕೆಲ್ಲಿ ಅವರಿಗೆ ತಾಳಿ ಕಟ್ಟುವ ಮೂಲಕ ಭಾರತೀಯ ಸಂಪ್ರದಾಯದಂತೆ ಚಿತ್ರದುರ್ಗದ ಅಭಿಲಾಶ್ ಮದುವೆಯಾದರು.

ಅಮೆರಿಕಾದಲ್ಲಿ ಓದುತ್ತಿದ್ದಾಗ ಕೋವಿಡ್ ವೇಳೆ ಸ್ನೇಹಿತರಾಗಿದ್ದ ಇಬ್ಬರೂ ನಂತರ ಪ್ರೀತಿಸಲು ತೊಡಗಿದರು. ಕೊನೆಗೆ ಇಬ್ಬರೂ ತಮ್ಮ ಪಾಲಕರನ್ನು ಒಪ್ಪಿಸಿದ್ದರಿಂದ ವಿವಾಹ ನಿಶ್ಚಯವಾಯಿತು. ಈ ಮೂಲಕ ಕುಟುಂಬದವರ ಆಶೀರ್ವಾದದೊಂದಿಗೆ ಕೊನೆಗೂ ಜೋಡಿಯಾಗಿದ್ದಾರೆ.

ಭಾರತೀಯ ಉಡುಪು ಧರಿಸಿದ್ದ ಕೆಲ್ಲಿ ಫ್ಯಾಮಿಲಿ ಕೂಡ ಮದುವೆ ಸಮಾರಂಭದಲ್ಲಿ ಮಿಂಚಿ ಸಂಭ್ರಮಿಸಿದರು. ಕೆಲ್ಲಿ ಕನ್ನಡ ಪ್ರೇಮಕ್ಕೆ ಅಭಿಲಾಷ್ ಖುಷಿಯಾಗಿದ್ದದ್ದು, ಕಂಡುಬಂದಿತು. ಒಟ್ಟಾರೆ ಈ ಮದುವೆ ಸಾಂಸ್ಕೃತಿಕ ಐಕ್ಯತೆಗೆ ಸಾಕ್ಷಿಯಾಯಿತು.

ಕೆಲ್ಲಿಯೂ ಭಾರತೀಯಳು: ಓದುವ ವೇಳೆಯೇ ಪರಸ್ಪರ ಪ್ರೇಮಾಂಕುರವಾಯ್ತು. ವಿದೇಶಿ ಯುವತಿಯನ್ನು ಮದುವೆಯಾಗಿದ್ದು ಸಂತಸ ಉಂಟು ಮಾಡಿದೆ. ಎರಡೂ ಕಡೆ ಸಾಂಸ್ಕೃತಿಕ ಭಿನ್ನತೆ ಇದೆ. ಅರ್ಥಮಾಡಿಕೊಳ್ಳುವ ಉತ್ಸಾಹವಿದೆ ಎಂದು ಅಭಿಲಾಷ್ ತಿಳಿಸಿದರು. ಕೆಲ್ಲಿಗೂ ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿ ಇದೆ. ಬರಹಗಾರ್ತಿಯಾಗಿದ್ದು, ಇಲ್ಲಿನ ಜನ ಜೀವನದ ಬಗ್ಗೆ ಒಲವು ಇದೆ. ನಮ್ಮೊಂದಿಗೆ ಬೆರೆತ ಕಾರಣ ಭಾರತೀಯಳೇ ಆಗಿದ್ದಾಳೆ ಎಂದರು.

ಕನ್ನಡದಲ್ಲೇ ಮಾತು ಆರಂಭ: ಕನ್ನಡದಲ್ಲೇ ಮಾತು ಆರಂಭಿಸಿದ ಕೆಲ್ಲಿ ನಾನು ಈ ಭಾಷೆ ಕಲಿತಿದ್ದು, ಕನ್ನಡತಿ ಆಗಿದ್ದೇನೆ ಎಂದು ಹೃದಯ ತುಂಬಿ ಹೇಳಿದರು. ಮದುವೆ ಶಾಸ್ತ್ರಗಳು, ಸ್ವಾಗತಿಸಿದ ರೀತಿ ತುಂಬಾ ಇಷ್ಟವಾಯಿತು. ಭಾರತೀಯ ಸಂಸ್ಕೃತಿ ಚೆನ್ನಾಗಿದೆ. ಭಾರತೀಯನನ್ನು ಮದುವೆ ಆಗಿದ್ದಕ್ಕೆ ಕುಟುಂಬಸ್ಥರಲ್ಲೂ ಸಂತೋಷವಿದೆ. ಅವರೆಲ್ಲ ಅಭಿಲಾಷನನ್ನು ಪ್ರೀತಿಸುತ್ತಾರೆ ಎಂದರು.

ವರ ಬಿಎನ್‌ವೈ ಬ್ಯಾಂಕ್‌ನಲ್ಲಿ ಕ್ವಾಂಟಿಟಿ ರಿಸರ್ಚರ್ ಆಗಿ ಕೆಲಸ ಮಾಡುತ್ತಿದ್ದು, ವಧು ಹೆಲ್ತ್ ಕೇರ್ ಕಂಪನಿಯಲ್ಲಿ ಇನ್ಸ್‌ಸ್ಟ್ರಕ್ಷನಲ್ ಡಿಸೈನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.