ಹಾಸನ: ಭಾರತೀಯ ಸೇನೆಯ ಸಮವಸ್ತ್ರದಲ್ಲಿಯೇ ಒಂದು ಶಕ್ತಿ ಇದ್ದು, ಈ ಸಮವಸ್ತ್ರ ಧರಿಸಿದ ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಮೂಡುವುದರ ಜೊತೆಗೆ ದೇಶದ ಪರ ಹೋರಾಡುವ ಕಿಚ್ಚು ಮೂಡುತ್ತದೆ ಎಂದು ಮಾಜಿ ಸೈನಿಕ ಸುಬ್ಬೇದಾರ್ ಸೋಮಶೇಖರ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ರೋಟರಿ ಕ್ಲಬ್ ಆಪ್ ಹಾಸನ್ ರಾಯಲ್ ವತಿಯಿಂದ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕಾದ ಪುಣ್ಯ ಮಾಡಿರಬೇಕು. ನಮ್ಮ ಭಾರತೀಯ ಸೇನೆ ಅತ್ಯಂತ ಶಾಂತಿ ಪ್ರೀಯರು, ಹಾಗೆಯೇ ಎದುರಾಳಿಗಳು ದಾಳಿ ಮಾಡಿದ ವೇಳೆ ಅಷ್ಟೇ ಸಮರ್ಥವಾಗಿ ಹೋರಾಡ ಬಲ್ಲ ಬಲಿಷ್ಠ ಸೇನೆಯಾಗಿದೆ ಎಂದು ಹೇಳಿದರು.
ಪಾಕಿಸ್ತಾನ ಹಾಗೂ ಚೀನ ದೇಶಗಳು ನೇರವಾಗಿ ಹೋರಾಟ ಮಾಡುವ ಗುಣ ಹೊಂದಿಲ್ಲ, ಮೋಸದಿಂದ ದಾಳಿ ಮಾಡುವುದೇ ಹೆಚ್ಚು. ನಮ್ಮ ಸೇನೆಯಲ್ಲಿರುವ ಹಿರಿಯ ಅಧಿಕಾರಿಗಳು ನೀಡುವ ಮಾರ್ಗದರ್ಶನವನ್ನು ಸರಿಯಾಗಿ ಪಾಲನೆ ಮಾಡಿದರೆ ಯಾವುದೇ ಸಾವು ನೋವುಗಳು ಸಂಭವಿಸುವುದಿಲ್ಲ. ನಮ್ಮ ಸೇವಾ ಅವಧಿ 28 ವರ್ಷದಲ್ಲಿ ಒಂದು ದಿನವೂ ಹಿರಿಯ ಅಧಿಕಾರಿಗಳು ನೀಡಿದ ಸಲಹೆಯನ್ನು ಕಡೆಗಣಿಸದೆ ನಿಯಮ ಪಾಲನೆ ಮಾಡಿದ್ದರಿಂದ ಯಾವುದೇ ಅಪಾಯಗಳು ಎದುರಾಗಳಿಲ್ಲ. ಅನೇಕ ಯೋಧರು ಇಂತಹ ನಿಯಮಗಳನ್ನು ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸಿ ತಮ್ಮ ಜೀವಗಳಿಗೆ ಅಪಾಯ ತಂದುಕೊಂಡಿದ್ದಾರೆ. ಯೋಧರ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಆದರೇ ಸೇನೆಯಲ್ಲಿ ನೀಡುವ ಸಮವಸ್ತ್ರವನ್ನು ಧರಿಸಿಕೊಂಡರೆ ಎಂತಹ ಕಷ್ಟಗಳು ಎದುರಾದರೂ ಹೋರಾಡುವ ಹೊಸ ಚೈತನ್ಯ ಬರಲಿದೆ ಎಂದರು.
ಕಾರ್ಗಿಲ್ ಸಮಯದಲ್ಲಿ ಈಗಿನ ಕಾಲದಲ್ಲಿ ಇದ್ದಂತಹ ಅತ್ಯಾಧುನಿಕ ಯುಧದ ಸಾಮಗ್ರಿಗಳು, ವಾಹನಗಳು ಇರಲಿಲ್ಲ ಹಾಗಾಗಿ ಸುಮಾರು 527 ಮಂದಿ ಯೋಧರನ್ನು ಕಳೆದುಕೊಳ್ಳಬೇಕಾಯಿತು. ಹಾಗೇಯೆ ಸುಮಾರು 1300 ಕ್ಕೂ ಅಧಿಕ ಯೋಧರು ದಾಳಿಗೆ ಒಳಗಾಗಿ ವಿವಿಧ ತರನಾದ ಗಾಯಾಳುಗಳಾದರು. ಇದರಿಂದ ಯೋಧರ ಕುಟುಂಬಗಳು ತೊಂದರೆ ಅನುಧವಿಸುವಂತಾಯಿತು. ಅದರಲ್ಲೂ ಕೆಲವು ಪ್ರದೇಶದಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಾದರೆ ತಮ್ಮ ಸಂಬಂಧಗಳನ್ನೆಲ್ಲಾ ಮರೆತು ಕೆಲಸ ಮಾಡಬೇಕಾಗಿರುತ್ತದೆ. ಅನೇಕ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ನಡೆಯುವ ಶುಭ ಕಾರ್ಯ ಹಾಗೆಯೇ ಸಾವು ನೋವುಗಳಿಗೂ ಬಾರದೆ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ದೇಶವನ್ನು ರಕ್ಷಿಸುವ ಪ್ರತಿಯೊಬ್ಬ ಯೋಧರನ್ನು ದೇಶದ ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಪ್ ಹಾಸನ್ ರಾಯಲ್ ಅಧ್ಯಕ್ಷ ಯು.ವಿ. ಸಚ್ಚಿನ್, ಕಾರ್ಯದರ್ಶಿ ಆರ್.ಟಿ. ಪುನೀತ್, ಖಜಾಂಚಿ ಪಿ. ರವಿ ಕುಮಾರ್, ವಲಯ ಸೇನಾನಿ ಡಾ. ವಿಕ್ರಂ ಬಿ. ಹಾಗೂ ಇತರರು ಹಾಜರಿದ್ದರು.