ಜಿಲ್ಲೆ

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನ: ಜೆ. ಸಿ.ಮಾಧುಸ್ವಾಮಿ

ಅರಸೀಕೆರೆ: ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನವಿದೆ ಎಂದು ಸಣ್ಣ ನಿರಾವರಿ ಸಚಿವ ಜೆ. ಸಿ.ಮಾಧುಸ್ವಾಮಿ ಹೇಳಿದರು.

ತಾಲೂಕಿನ ಶಶಿವಾಳ ಗ್ರಾಮದಲ್ಲಿಇತ್ತೀಚೆಗೆ ನಡೆದ ಚಿತ್ತರಗಿ ಪರಮತಪಸ್ವಿ ಲಿಂಗೈಕ್ಯ ಶ್ರೀ ವಿಜಯ ಮಹಾತ ಶಿವಯೋಗಿಗಳು ಹಾಗೂ ಶ್ರೀ ಗಂಗಾಧರ ರಾಜಯೋಗೀಂದ್ರ ಶ್ರೀಗಳ 20 ನೇ ವರ್ಷದ ಪುಣ್ಯ ಸಂಸ್ಮರಣೆ ಮತ್ತು ಶರಣ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಬದಲಾದ ವಿದ್ಯಮಾನದಲ್ಲಿ ಶರಣರ ಸಂಸ್ಕೃತಿ, ಆಚಾರ,ವಿಚಾರಗಳು ವಿಮರ್ಶೆಗೆ ಒಳಪಡುತ್ತಿವೆ.ಮುಂದಿನ ಪೀಳಿಗೆಗೆ ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ಮತ್ತು ಹಕ್ಕು ನಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯಬಾರದು. ಗುರುವಿನ ಆರ್ಶಿವಾದದಿಂದ ಮತ್ರವೇ ಗುರಿ ಮುಟ್ಟಲು ಸಾಧ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಹರ ಮುನಿದರೂ ಗುರು ಕಾಯುವನು ಎಂಬ ಭಕ್ತರ ನಂಬಿಕೆ ಪ್ರಶ್ನಾತೀತವಾದುದು ಎಂದು ಮಠ ಮಾನ್ಯಗಳ ಕೊಡುಗೆಯನ್ನು ಕೊಂಡಾಡಿದರು.


ತಿಪಟೂರು ಷಡಾಕ್ಷರ ಮಠದ ಶ್ರೀರುದ್ರಮುನಿ ಸ್ವಾಮೀಜಿ ಮಾತನಾಡಿ, ಮಠ, ಮಂದಿರಗಳು ಭಕ್ತರ ಆಧ್ಯಾತ್ಮಿಕ ತಾಣಗಳಾಗಿವೆ. ಗುರು ಮತ್ತು ಶಿಷ್ಯರ ಬಾಂಧವ್ಯದ ಬೆಸುಗೆಯನ್ನು ಯಾರಿಂದಲೂ ಅಳಿಸಲಾಗದು. ಇಂದಿನ ಯುವ ಜನರತೆ ಆಧುನಿಕ ಜೀವನ ಶೈಲಿಗೆ ಮಾರು ಹೋಗುತ್ತಿದ್ದು ದೈವದ ಅಸ್ತಿತ್ವವನ್ನೇ ಪ್ರಶ್ನಿಸುವ ಹಂತಕ್ಕೆ ಬೆಳೆದಿರುವುದು ಕಳವಳಕಾರಿ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಶಾಂತಿ ಹಾಗೂ ನೆಮ್ಮದಿಯೊಂದಿಗೆ ಭಾವೈಕ್ಯತೆಯಲ್ಲಿ ಬಾಳುತ್ತಿರುವುದಕ್ಕೆ ಧಾರ್ಮಿಕ ಸಂಸ್ಕೃತಿ ಕಾರಣವಾಗಿದೆ. ದೇವರು, ಧರ್ಮ, ತಂದೆ, ತಾಯಿ, ಗುರು ಹಿರಿಯರು ಎನ್ನುವಂತಹ ಪೂಜ್ಯಭಾವನೆ, ಉತ್ತಮ ಸಂಸ್ಕಾರವನ್ನು ಪಡೆದು ಜೀವನದ ಸಾರ್ಥಕತೆಯನ್ನು ಕಾಣುವಂತಾಗಿದೆ ಎಂದರು.ಡಿ.ಎಂ.ಕುರ್ಕೆ ಬೂದಿಹಾಳ್ ವಿರಕ್ತ ಮಠದ ಶ್ರೀಶಶಿಶೇಖರ ಸಿದ್ದಬಸವ ಸ್ವಾಮೀಜಿ ಮಾತನಾಡಿದರು.ಜಿಪಂ ಮಾಜಿ ಸದಸ್ಯ ಮಾಡಾಳು ಸ್ವಾಮಿ, ರಾಂಪುರ ಗ್ರಾ.ಪಂ.ಅಧ್ಯಕ್ಷ ಕರುಣಾಕರಸ್ವಾಮಿ ಇನ್ನಿತರರು ವೇದಿಕೆಯಲ್ಲಿದ್ದರು.