ಸೇಡಂ: ಜಗತ್ತು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಎಷ್ಟೇ ಮುಂದುವರಿದಿದ್ದರೂ ಸಾಮಾನ್ಯ ಪ್ರಜ್ಞೆ ಇಲ್ಲದಿದ್ದರೆ ದುರಂತಗಳು ಸಂಭವಿಸುತ್ತವೆ. ಹೀಗಾಗಿ ಇಂದಿನ ಯುವಪೀಳಿಗೆಗೆ ಸಾಮಾನ್ಯ ಪ್ರಜ್ಞೆಯ ಶಿಕ್ಷಣ ನೀಡುವ ಕೆಲಸವಾಗಬೇಕು ಎಂದು ಹೊಸಪೇಟೆ-ಹಾಲಕೇರಿಯ ಕೊಟ್ಟೂರೇಶ್ವರ ಸಂಸ್ಥಾನದ ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.
ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ 2025ರಲ್ಲಿ ನಡೆಯಲಿರುವ 7ನೇ ಭಾರತೀಯ ಸಂಸ್ಕೃತಿ ಉತ್ಸವ ಹಾಗೂ ಕೊತ್ತಲ ಸ್ವರ್ಣ ಜಯಂತಿ ಕಾರ್ಯಕ್ರಮದ ಸ್ವಾಗತ ಸಮಿತಿಗಳ ಅನಾವರಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅಕ್ಷರ ಕಲಿತವರಿಂದಲೇ ಸಮಾಜದಲ್ಲಿ ತಪ್ಪುಗಳು ನಡೆಯುತ್ತಿವೆ. ಬರುವ ದಿನಗಳಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಜರುಗಲಿರುವ ಬೃಹತ್ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಸಂರಕ್ಷಕ ಡಾ.ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಸೃಜನ್ಮಾತಕ ಕಾರ್ಯದಿಂದ ದೇಶ ಗೆಲ್ಲಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ 9ದಿನ ನಡೆಯುವ ಸ್ವರ್ಣ ಜಯಂತಿ ಕಾರ್ಯಕ್ರಮ ಪ್ರೇರಣೆಯಾಗಲಿದೆ. ತಮ್ಮದೆಯಾದ ರೀತಿಯಲ್ಲಿ ಸಾಧನೆಗೈದ ಅಸಾಧಾರಣ ವ್ಯಕ್ಯಿಗಳನ್ನು ಗುರುತಿಸಿ ವಿಶೇಷವಾಗಿ ಸತ್ಕರಿಸುವ ಕೆಲಸ ನಡೆಯಲಿದೆ. ಮನುಷ್ಯನಲ್ಲಿ ಕೇವಲ ಅಕ್ಷರದ ಜ್ಞಾನವಿದ್ದರೆ ಸಾಲದು, ಅದರೊಟ್ಟಿಗೆ ಬದುಕು ಕಟ್ಟಿಕೊಳ್ಳುವ ಕೌಶಲವು ಅವಶ್ಯವಾಗಿದೆ. 2025ರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಿಂದ ಸುಮಾರು 30 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಹಾವೇರಿಯ ಶ್ರೀ ಸದಾಶಿವ ಸ್ವಾಮೀಜಿ, ವಿಜಯಪುರದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿದರು. ಗುರುಮಠಕಲ್‌ನ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಟೆಂಗಳಿಯ ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯರು, ತೊಟ್ನಳ್ಳಿಯ ಶ್ರೀ ಡಾ.ತ್ರೀಮೂರ್ತಿ ಶಿವಾಚಾರ್ಯರು, ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ, ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಮಂಠಾಳದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಸಿಂಧನಮಡುವಿನ ಶ್ರೀ ಸಂತೋಷ ಮಹಾರಾಜ, ಹೂಡಾದ ಶ್ರೀ ಮರೆಪ್ಪ ಪೂಜಾರಿ, ಮಳಖೇಡ ದರ್ಗಾದ ಸೈಯ್ಯದ್ ಶಹಾ ಮುಸ್ತಫಾ ಖಾದ್ರಿ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಇತರರಿದ್ದರು.
ಅಂಜನಾ ಭೋವಿ ಪ್ರಾರ್ಥಿಸಿದರು. ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಸ್ವಾಗತಿಸಿದರು. ಅನುರಾಧ ಪಾಟೀಲ್ ನಿರೂಪಣೆ ಮಾಡಿ, ವಂದಿಸಿದರು.
ಉತ್ಸವಕ್ಕೆ ಹಾರಕೂಡ ಮಠದಿಂದ 5 ಲಕ್ಷ ರೂ.: ಸ್ವಚ್ಛ ಮನಸ್ಸಿನಿಂದ ಮಾಡಿದ ಕೆಲಸ ಯಾವತ್ತಿಗೂ ಯಶಸ್ವಿಯಾಗಿರುತ್ತದೆ. ಅಂತಹ ಸಾತ್ವಿಕತೆಯ ಮನಸ್ಸುಳ್ಳ ಡಾ.ಸೇಡಂ ಅವರು ಸಮಾಜದ ಒಳಿತಿಗಾಗಿ, ಭಾರತ ಮಾತೆಯ ಸೇವೆಗಾಗಿ ನಡೆಸುತ್ತಿರುವ ಸ್ವರ್ಣ ಜಯಂತಿ ಹೆಸರಿನ ಕಾರ್ಯಕ್ರಮ ಶ್ಲಾಘನೀಯ.. ಸಮಾಜಕ್ಕೆ ಏನನ್ನಾದರು ಕೊಡಬೇಕು ಎನ್ನುವ ಹಂಬಲ ಅವರದ್ದಾಗಿದೆ. ಹೀಗಾಗಿ ಉತ್ಸವಕ್ಕೆ ಹಾರಕೂಡ ಮಠದಿಂದ 5 ಲಕ್ಷ ರೂ.ಗಳನ್ನು ಆಶೀರ್ವಾದದ ರೂಪದಲ್ಲಿ ನೀಡಲಾಗುವದು ಎಂದು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಘೋಷಿಸಿದರು.