ಬೀದರ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈ ಭಾರತ ಮಾತಾ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ನೌಬಾದ್ ಅರಣ್ಯ ನರ್ಸರಿ ಪಕ್ಕದ ಶ್ರೀ ಔದುಂಬರಲಿಂಗ ಆಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ನಾಡಿನ ಶ್ರೇಷ್ಠ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅನಾವರಣವೇ ಮಾಡಿತು. ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಕಲಾ ತಂಡಗಳು ನೀಡಿದ ಪ್ರದರ್ಶನವನ್ನು ಸಹಸ್ರಾರು ಜನರು ಕಣ್ತುಂಬಿಕೊಂಡು ತಲೆದೂಗಿದರು.
ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ) ಅವರ ಸಾನ್ನಿಧ್ಯವು ಈ ಕಾರ್ಯಕ್ರಮಕ್ಕೆ ಅರ್ಥಪೂರ್ಣತೆ ತಂದುಕೊಟ್ಟಿತು. ಮಧ್ಯಾಹ್ನ ಶುರುವಾದ ಕಾರ್ಯಕ್ರಮಗಳು ಸಂಜೆವರೆಗೆ ನಿರಂತರ ನಡೆದವು. ಬೀಸುತ್ತಿದ್ದ ತಂಪು ಗಾಳಿ, ತೀವ್ರ ಚಳಿ ನಡುವೆಯೂ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಆಸಕ್ತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜ್ಯರ ದರ್ಶನ ಪಡೆದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಉದ್ಘಾಟಿಸಿ ಮಾತನಾಡಿ, ಭಾರತೀಯ ಪರಂಪರೆ, ಸಂಸ್ಕೃತಿ ಶ್ರೇಷ್ಠವಾಗಿದೆ. ಇಂದಿನ ಪೀಳಿಗೆ ಹೊಸದರ ಗುಂಗಿನಲ್ಲಿ ಹಳೆಯದ್ದನ್ನು ಮರೆಯಬಾರದು. ಸಂಸ್ಕೃತಿ ಹಾಳಾದರೆ ಮನುಷ್ಯತ್ವವೇ ಇರಲ್ಲ. ಪ್ರತಿಯೊಬ್ಬರೂ ಸಂಸ್ಕೃತಿ ಉಳಿಸಿ, ಬೆಳೆಸಲು ಪ್ರಯತ್ನಿಸಬೇಕು. ಇದಕ್ಕೆ ಪೂರಕವಾಗಿ ಶ್ರೀ ನಿರಗುಡಿ ಮುತ್ತ್ಯಾ ಅವರು ರಾಷ್ಟ್ರ, ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿರುವುದು ಮಾದರಿಯಾಗಿದೆ ಎಂದರು.
ಜಿಪಂ ಸದಸ್ಯ ಗುಂಡುರೆಡ್ಡಿ, ಹಿರಿಯ ಪತ್ರಕರ್ತರಾದ ಸದಾನಂದ ಜೋಶಿ, ಅಪ್ಪಾರಾವ್ ಸೌದಿ, ಪಿಎಸ್ಐ ಸಂತೋಷ ಎಲ್.ಟಿ., ಪ್ರಮುಖರಾದ ವೈಜಿನಾಥ ಎಸ್.ಝಳಕಿ, ಮಾರುತಿ ಬೌದ್ಧೆ, ವೀರಶೆಟ್ಟಿ ಖ್ಯಾಮಾ, ಶಹಾಜಿರಾವ ಪಾಟೀಲ್, ಶ್ರೀಮಂತ ಸಪಾಟೆ, ಜಸ್ ಪ್ರೀತಸಿಂಗ್ ಮೊಂಟಿ, ನಾಗೇಶ ಕಡೆಮನಿ, ನಾಗಶೆಟ್ಟಿ ಧರಂಪುರ, ಶಿವಕುಮಾರ ವಣಗೇರಿ, ಪಪ್ಪು ಪಾಟೀಲ್ ಖಾನಾಪುರ, ಎಂ.ಪಿ. ಮುಂದಾಳೆ ಇತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಭಕ್ತಕುಂಬಾರ ನಿರೂಪಣೆ ಮಾಡಿದರು. ಈ ವೇಳೆ ಸಂವಿಧಾನ ಅಂಗೀಕಾರ ದಿನಾಚರಣೆ ನಿಮಿತ್ತ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಕಾರ್ಯಕ್ರಮಕ್ಕಾಗಿ ಜೈ ಭಾರತ ಮಾತಾ ಸೇವಾ ಸಮಿತಿ ಭರ್ಜರಿ ಸಿದ್ಧತೆ ಮಾಡಿತ್ತು. ವಿಶಾಲ ಆವರಣದಲ್ಲಿ ಹೆಚ್ಚಿನ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ನೋಡುವ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಉತ್ತರ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮನ ರಂಜಿಸಿದ ಕಾರ್ಯಕ್ರಮ
ಶಾಸ್ತ್ರೀಯ ಸಂಗೀತ, ವಚನ ಗಾಯನ, ಜನಪದ ಗೀತೆ, ಸುಗಮ ಸಂಗೀತ, ಸಮೂಹ ನೃತ್ಯ, ಚಿಟ್ಟ ಹಲಗೆ, ಲಮಾಣಿ ನೃತ್ಯ, ಕರಡಿ ಮಜಲು, ಮೊಹರಂ ಪದ, ಹಂತಿ ಪದಗಳು ಮನಸೂರೆಗೊಳಿಸಿದವು. ಕೋಲಾರದ ಮಂಜುನಾಥ ತಂಡದ ತಮಟೆ ಸಭಿಕರಿಗೆ ರಂಜಿಸಿತು. ನಾನಾ ಭಾವಭಂಗಿಗಳಲ್ಲಿ ಅಬ್ಬರಿಸಿದ ಈ ವಾದನ ತಮಟೆ ವೈಶಿಷ್ಟೃತೆಗೆ ಸಾಕ್ಷಿಯಾಯಿತು. ರಾಯಚೂರಿನ ಅಂಬರೀಶ ತಂಡದ ಹಗಲುವೇಷ, ಉಷಾ ಪ್ರಭಾಕರ ತಂಡದ ನೃತ್ಯ, ನರಸಿಂಹಲು ಡಪ್ಪೂರ ಗಾಯನ, ಲೋಕನಾಥ ಚಾಂಗಲೇರಾ ತಬಲಾ ವಾದನ ಆಕರ್ಷಿಸಿತು. ವಿಜಯಕುಮಾರ ಸೋನಾರೆ ತಂಡದ ಐಕ್ಯತೆ ನಾಟಕ ಸರ್ವಧರ್ಮ ಸಮಭಾವ ಸಾರಿತು.
ದೇಶದ ಸಂವಿಧಾನದ ಆಶಯದಂತೆ ಜೈ ಭಾರತ ಮಾತಾ ಸೇವಾ ಸಮಿತಿ ಮೂಲಕ ಸದ್ಗುರು ಹವಾ ಮಲ್ಲಿನಾಥ ಮಹಾರಾಜರು ನಿರಂತರ ಕೆಲಸ ಮಾಡುತ್ತಿದ್ದಾರೆ. ದೇಶದ ಏಕತೆ, ಅಖಂಡತೆಯೊಂದಿಗೆ ಸುಂದರ ಸಮಾಜ ಕಟ್ಟುವಲ್ಲಿ ತೊಡಗಿದ್ದು, ದೇಶವ್ಯಾಪಿ ಸಂಚಾರ ಮಾಡಿ ಜನಜಾಗೃತಿ ಮೂಡಿಸುತ್ತಿರುವುದು ಮಾದರಿ.| ಅರವಿಂದ ಅರಳಿ, ವಿಧಾನ ಪರಿಷತ್ ಸದಸ್ಯ
ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಮಾನವೀಯ ಮೌಲ್ಯ ಉಳಿಸುವುದು ಎಲ್ಲರ ಕರ್ತವ್ಯ. ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜಾತಿ, ಮತ, ಪಕ್ಷದ ಭೇದ ಎನ್ನದೇ ಎಲ್ಲರೂ ರಾಷ್ಟ್ರಕಟ್ಟುವ. ರಾಷ್ಟ್ರ ರಕ್ಷಿಸುವ ಮಹತ್ತರ ಕೆಲಸ ಮಾಡುವುದು ಇಂದಿನ ಜರೂರಿಯಿದೆ. ದೇಶದ ಉಳಿಯದಿದ್ದರೆ ಯಾರೂ ಇರಲ್ಲ ಎಂಬ ಸತ್ಯ ಅರಿಯಿರಿ.| ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜಜೈ ಭಾರತ ಮಾತಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ