ಜಿಲ್ಲೆ

ಭಾರತೀಯ ವ್ಯಕ್ತಿತ್ವ ಯುವಸಮೂಹ ಮೈಗೂಡಿಸಿಕೊಳ್ಳಿ

ಚಿತ್ರದುರ್ಗ: ಭಾರತೀಯ ವ್ಯಕ್ತಿತ್ವ ಯುವಸಮೂಹ ಮೈಗೂಡಿಸಿಕೊಂಡು ರಾಷ್ಟ್ರಭಕ್ತಿ, ಭಾಷಾಭಿಮಾನ ಇಲ್ಲವೆಂಬ ಮಾತು ಸುಳ್ಳಾಗಿಸಿ ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಎರಡು ದಿನ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆ ಶನಿವಾರ ಉದ್ಘಾಟಿಸಿ ಮಾತನಾಡಿದರು.

ದೇಶದ ಭವ್ಯ ಪರಂಪರೆ, ಸಂಸ್ಕೃತಿ ಗೌರವಿಸಲು ಮುಂದಾಗಿ. ಇತಿಹಾಸ, ಸಾಹಿತ್ಯ ಸೇರಿ ಕಲೆಗಳನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಕೈಜೋಡಿಸಿ. ಹೋರಾಟಗಾರರು, ಸಮಾಜ ಸುಧಾರಕರು, ಮಹನೀಯರ ಆದರ್ಶ ಮೈಗೂಡಿಸಿಕೊಳ್ಳಿ. ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ಸತ್ಪ್ರಜೆಗಳಾಗಿ ಎಂದು ಕಿವಿಮಾತು ಹೇಳಿದರು.

ಎಬಿವಿಪಿ ಮಂಡ್ಯ ಜಿಲ್ಲಾ ವಿಭಾಗ ಪ್ರಮುಖ ರವಿ ಮಂಡ್ಯ ಮಾತನಾಡಿ, 75 ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದ ಎಬಿವಿಪಿ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಮೂಡಿಸುತ್ತಿದೆ. ಆಧುನಿಕ ಭಾರತವನ್ನಾಗಿಸಿ, ಸರ್ವಾಂಗೀಣ ಅಭಿವೃದ್ಧಿ ಸಾಧಿಸುವಲ್ಲಿ ಯುವಸಮೂಹದ ಜವಾಬ್ದಾರಿ ಹೆಚ್ಚಿದೆ. ಈ ನಿಟ್ಟಿನಲ್ಲಿ ಸನ್ನದ್ಧರಾಗಿ ಎಂದು ಸಲಹೆ ನೀಡಿದರು.

ಶಿಕ್ಷಣ ವ್ಯಾಪಾರೀಕರಣದ ವಿರುದ್ಧ, ರಾಷ್ಟ್ರ, ಸಮಾಜ, ಸಂಸ್ಕೃತಿಗೆ ಧಕ್ಕೆ ಉಂಟಾದಾಗ, ಮೆಕಾಲೆ ಶಿಕ್ಷಣ ನೀತಿ ಬದಲು ಈ ಮಣ್ಣಿನ ಶಿಕ್ಷಣ ಜಾರಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವಲ್ಲಿ ಸಾವಿರಾರು ವಿದ್ಯಾರ್ಥಿಗಳು ಕೆಚ್ಚೆದೆ ಪ್ರದರ್ಶಿಸಿದ್ದಾರೆ ಎಂದರು.

ನಕ್ಸಲರ ವಿರುದ್ಧ ಚಳವಳಿ, ಪ್ರಕೃತಿ ವಿಕೋಪದ ವೇಳೆ ಅನೇಕ ಎಬಿವಿಪಿ ಕಾರ್ಯಕರ್ತರು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ವಸತಿನಿಲಯ, ಬಸ್‌ಪಾಸ್ ಸಮಸ್ಯೆ ಸೇರಿ ವಿದ್ಯಾರ್ಥಿಗಳ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ಬೀದಿಗಿಳಿದು ಪ್ರತಿಭಟಿಸಿ, ಪರಿಹಾರಕ್ಕಾಗಿ ಶ್ರಮಿಸಿದೆ ಎಂದು ವಿವರಿಸಿದರು.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರೇಮಾಶ್ರೀ, ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ವರ ಇತರರಿದ್ದರು. ಎಬಿವಿಪಿ ಕಾರ್ಯಕರ್ತರು, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.