ಜಿಲ್ಲೆ

ಭಾರತೀಯ ವಾಸ್ತು ಶಿಲ್ಪದ ಅಧಿಪತಿ ವಿಶ್ವಕರ್ಮ, ವಾಸ್ತು ವಿಜ್ಞಾನದ ಕುರಿತು ವಿದ್ಯಾರ್ಥಿಗಳಿಗೆ ಅರಿವು

ಭಾರತೀಯ ವಾಸ್ತುಶಿಲ್ಪದ ಅಧಿಪತಿಯಾಗಿರುವ ಹೆಸರೇ ವಿಶ್ವಕರ್ಮ. ಋಗ್ವೇದದ ಮಂತ್ರಗಳಲ್ಲಿ ವಿಶ್ವಕರ್ಮನನ್ನು ಬ್ರಹ್ಮಾಂಡದ ಶಿಲ್ಪಿ ಎಂದು ಕರೆಯಲ್ಪಟ್ಟಿತ್ತು ಎಂದು ಆದಿತ್ಯ ಜ್ಯೋತಿರ ವಿಜ್ಞಾನ ಶಾಲೆ ಅಧ್ಯಕ್ಷ ಗಜೇಂದ್ರ ಬಾಬು ತಿಳಿಸಿದ್ದಾರೆ.

ವಿಶ್ವಕರ್ಮರಾಜ ಜಯಂತಿ ಪ್ರಯುಕ್ತ ನಗರದ ಸಿಎಂಆರ್ ವಿಶ್ವವಿದ್ಯಾಲಯ ವಾಸ್ತುವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ವಿಶ್ವಕರ್ಮನ ಕಲೆ ಕೇವಲ ದೈವ ಲೋಕಕ್ಕೆ ಸೀಮಿತವಾಗದೆ ಮಾನವ ಲೋಕಕ್ಕೂ ದೊರೆತ ಅಮೂಲ್ಯ ಕೊಡುಗೆ ಅವರು ಸ್ಥಾಪಿಸಿದ ಐದು ಪ್ರಮುಖ ಕಲೆಗಳನ್ನೇ ಪಂಚಶಿಲ್ಪಿಗಳು ಎಂದು ಕರೆಯಲಾಗುತ್ತಿದೆ ಎಂದು ಹೇಳಿದರು.

ವಾಸ್ತುಶಿಲ್ಪ ಶಾಸ್ತ್ರ ದೇವಾಲಯ, ಅರಮನೆ,ಮತ್ತು ಮನೆಗಳ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುವ ವಿಜ್ಞಾನವಾಗಿದೆ. ವಿಶ್ವಕರ್ಮ ಸಕಲ ವಾಸ್ತುಶಿಲ್ಪದ ಮೂಲಪುರುಷನಾಗಿದ್ದು ವಾಸ್ತುಶಾಸ್ತ್ರ ನಮ್ಮ ವೇದದ ಪ್ರಕಾರ ಪಂಚಭೂತಗಳಿಂದ ನಿರ್ಮಿತವಾದ ಶಾಸ್ತ್ರವಾಗಿದೆ. ವಾಸ್ತು ಶಾಸ್ತ್ರ ಸಾಮಾನ್ಯ ಜನತೆಯ ಜತೆಗೆ ಸಿವಿಲ್ ಇಂಜಿನಿಯರಿಂಗ್, ಇಂಟೀರಿಯರ್ ಡಿಸೈನ್, ಆರ್ಕಿಟೆಕ್ಚರ್ ವಿದ್ಯಾರ್ಥಿಗಳು ಅಭ್ಯಾಸ ಮಾಡಿದರೆ ಉತ್ತಮ ಎಂದು ತಿಳಿಸಿದರು.

ವಾಸ್ತುವಿಜ್ಞಾನದಿಂದ ಆರೋಗ್ಯ,ಅಭಿವೃದ್ಧಿ,ಶಾಂತಿ, ಸಂತೋಷ, ಸೂಚಿಸುವ ವೈಜ್ಞಾನಿಕ ಶಾಸ್ತ್ರವಾಗಿದೆ. ಗೃಹ ನಿರ್ಮಾಣದಲ್ಲಿ ವಾಸ್ತು ವಿನ್ಯಾಸದ ಸೂತ್ರಗಳನ್ನು ಅಳವಡಿಸಿಕೊಂಡರೆ ಅಲ್ಲಿ ವಾಸ ಮಾಡುವ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸಾಕಷ್ಟು ನಿದರ್ಶನಗಳಿವೆ ಎಂದರು.

ವಿಶ್ವಕರ್ಮರ ಶಿಲ್ಪ ವೈಭವ ಅಂದರೆ ದ್ವಾರಕಾ ನಗರ ಲಂಕಾ ನಗರ ಪಾಂಡವರ ಇಂದ್ರಪ್ರಸ್ಥ ದೈವಿಕ ಅಸ್ತ್ರಗಳಾದ ವಿಷ್ಣುವಿನ ಸುದರ್ಶನ ಚಕ್ರ ಶಿವನ ತ್ರಿಶೂಲ ಇಂದ್ರನ ವಜ್ರಾಯುಧ ಮತ್ತು ಕುಬೇರನ ವಿಮಾನವಾದ ಪುಷ್ಪಕ ವಿಮಾನವು ಇವುಗಳೆಲ್ಲವೂ ವಿಶ್ವಕರ್ಮನ ಶಿಲ್ಪ ಕೌಶಲ್ಯದ ಉದಾಹರಣೆಯಾಗಿದೆ.ಸಾವಿರಾರು ವರ್ಷಗಳ ಹಿಂದೆ ತಂಜಾವೂರಿನ ಬೃಹದೇಶ್ವರ ದೇವಾಲಯ ಯಾವುದೇ ತಂತ್ರಜ್ಞಾನ ಅಥವಾ ತಂತ್ರಗಳನ್ನು ಬಳಸದೆ ನಿರ್ಮಿಸಿರುವುದು ವಾಸ್ತು ಶಾಸ್ತ್ರದ ಅದ್ಭುತಗಳಲ್ಲಿ ಒಂದಾಗಿದೆ ಅದೇ ರೀತಿ ಬೆಂಗಳೂರಿನಲ್ಲಿರುವ ಶ್ರೀ ಸೋಮೇಶ್ವರ ದೇವಾಲಯ ಹಲಸೂರು ಇಂತಹ ಅನೇಕ ದೇವಾಲಯಗಳು ವಾಸ್ತು ಶಾಸ್ತ್ರದ ಅನ್ವಯ ನಿರ್ಮಿಸಿರುವುದರಿಂದ ಇಲ್ಲಿ ದೊರಕುವ ಸಕರಾತ್ಮಕ ಶಕ್ತಿಗಳು ಮಾನವನ ಮೇಲೆ ಬೀರಿ ಮಾನವನನ್ನು ಹಾಗೂ ಅವನ ಜೀವನವನ್ನು ಸದೃಢಗೊಳಿಸುವಲ್ಲಿ ವಾಸ್ತು ವಿಜ್ಞಾನದ ಪಾತ್ರ ಅತಿ ಮುಖ್ಯವಾಗಿರುವುದು

ಸಂಶೋಧನೆಗಳಿಂದ ತಿಳಿದು ಬಂದಿರುವುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವಾಗ ಅವರು ಅನುಸರಿಸಿದ ವಾಸ್ತು ವಿಜ್ಞಾನದ ಸೂತ್ರಗಳು ಇಂದು ಬೆಂಗಳೂರು ನಗರದ ಅಭಿವೃದ್ಧಿಗೆ ಕಾರಣವಾಗಿ ಬೆಂಗಳೂರು ನಗರ ಪ್ರಪಂಚದಲ್ಲೇ ಒಂದು ಅತ್ಯಂತ ಉನ್ನತವಾದ ನಗರ ಎಂದು ಖ್ಯಾತಿ ಪಡೆಯಲು ಸಾಧ್ಯವಾಗಿದೆ.... ಇತ್ತೀಚೆಗೆ ಸನ್ಮಾನ್ಯ ಪ್ರಧಾನ ಮಂತ್ರಿಗಳು ಬೆಂಗಳೂರಿಗೆ ಭೇಟಿ ನೀಡಿದಾಗ ಬೆಂಗಳೂರು ನಗರವು ಭಾರತ ದೇಶದ ಶರೀರದ ಆತ್ಮ ಎಂದು ಬಣ್ಣಿಸಿರುವುದು ಬೆಂಗಳೂರು ನಗರವನ್ನು ವಾಸ್ತು ವಿಜ್ಞಾನದ ಅನ್ವಯ ನಿರ್ಮಾಣ ಮಾಡಿರುವ ಶ್ರೀ ಕೆಂಪೇಗೌಡರಿಗೆ ಸಲ್ಲುತ್ತದೆ. ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ದೇವಾಲಯಗಳೆಂದರೆ ಕೇವಲ ಅದೊಂದು ಪೂಜೆ ಪುನಸ್ಕಾರಗಳು ನಡೆಯುವ ಸ್ಥಳವಲ್ಲ ಅದರಲ್ಲಿ ಕಲೆ ವಿಜ್ಞಾನ ಇತಿಹಾಸ ಸಂಸ್ಕೃತಿ ಗಣಿತ ಕಟ್ಟಡದ ತಂತ್ರಜ್ಞಾನ ಭಕ್ತಿ ಭಾವನೆಗಳು ಮೇಳಯಿಸುವ ಶಕ್ತಿ ಅಡಗಿದೆ. ಹೀಗಾಗಿ ನಮ್ಮ ದೇಶದ ದೇವಾಲಯಗಳು ವಾಸ್ತುಶಿಲ್ಪದ ಸಂಸ್ಕೃತಿ ಮತ್ತು ಧರ್ಮದಲ್ಲಿ ಆಳವಾಗಿ ಬೇರೂರಿದೆ. ಕರ್ನಾಟಕದಲ್ಲಿ ವಾಸ್ತು ಶಾಸ್ತ್ರ ವಿಜ್ಞಾನದ ಶೈಲಿಯಲ್ಲಿ ಕದಂಬರು ಚಾಲುಕ್ಯರು ಹೊಯ್ಸಳರು ಹಾಗೂ ಅನೇಕ ರಾಜಮನೆತನದವರು ಕಟ್ಟಿರುವ ದೇವಾಲಯಗಳು ಮತ್ತು ಕಟ್ಟಡಗಳು ವಾಸ್ತು ಶಾಸ್ತ್ರಕ್ಕೆ ಹಿಡಿದ ಒಂದು ಕೈಗಡಿಯಾಗಿದೆ. ಎಂದರು.

ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಉಪಾಧ್ಯಾಯರು ತಮ್ಮ ದೈನಂದಿನ ಬೆಳವಣಿಗೆ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆ ,ನಿತ್ಯ ಮಲಗುವ ದಿಕ್ಕು, ಓದುವ ದಿಕ್ಕು, ಆರೋಗ್ಯ ಸೇರಿ ಹಲವು ವಿಚಾರಗಳ ಬಗೆ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಗಜೇಂದ್ರ ಬಾಬು ಅವರು ಪ್ರತಿಯೊಂದು ವಿಚಾರಕ್ಕೂ ವೈಜ್ಞಾನಿಕವಾಗಿ ಉದಾಹರಣೆಗಳನ್ನು ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅಲ್ಪಾವಧಿ ಕೋರ್ಸ್‌ಗಳು ಪ್ರಾರಂಭವಾಗಿದ್ದು ವಾಸ್ತವಿಜ್ಞಾನ,ಪಂಚಾಂಗ ಪರಿಚಯ, ಗ್ರಹಗಳ ಪರಿಚಯವನ್ನು ಅಭ್ಯಾಸ ನಡೆಸಬಹುದಾಗಿದೆ. ಅಲ್ಲದೆ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಸದ್ಯ ದೂರ ಶಿಕ್ಷಣದಲ್ಲಿ ಡಿಪ್ಲೋಮಾ ವಾಸ್ತು ವಿಜ್ಞಾನ ಮತ್ತು ಡಿಪ್ಲೋಮಾ ಫಲ ಜ್ಯೋತಿಷ್ಯ ಹಾಗೂ ಮೇದಿನಿ ಜ್ಯೋತಿಷ್ಯಗಳನ್ನು ಅಳವಡಿಸುತ್ತಿದ್ದಾರೆ. ಸೆ.16ರಂದು ಮೈಸೂರಿನಲ್ಲಿ ಚಾಲನೆ ದೊರೆಯಲಿದೆ ಎಂದರು