ಮೈಸೂರು: ಪರೀಕ್ಷಾ ಶುಲ್ಕ, ದಾಖಲಾತಿ ಶುಲ್ಕ ಕಡಿಮೆ ಮಾಡಿ ತಕ್ಷಣ ವಿದ್ಯಾರ್ಥಿ ವೇತನ ನೀಡುವಂತೆ ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಡಿ.ದೇವರಾಜ ಅರಸು ರಸ್ತೆಯಿಂದ ಜಿಲ್ಲಾಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಬಳಿಕ ಧರಣಿ ನಡೆಸಿದ ಪ್ರತಿಭಟನಾಕಾರರು, ವಿದ್ಯಾರ್ಥಿಗಳಿಗೆ ಆಗುತ್ತಿರುವ ಕುಂದುಕೊರತೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಪರೀಕ್ಷೆ ಮುಗಿದಿದ್ದರೂ ಲಿತಾಂಶ ನೀಡಲು ಸಾಧ್ಯವಾಗಿಲ್ಲ. ಪರೀಕ್ಷಾ ಶುಲ್ಕ, ದಾಖಲಾತಿ ಶುಲ್ಕ ಹೆಚ್ಚಳ ಮಾಡಲಾಗಿದೆ. ಲಾಪ್‌ಟ್ಯಾಪ್, ವಿದ್ಯಾರ್ಥಿ ವೇತನ ನೀಡಲು ಇನ್ನೂ ಸಾಧ್ಯವಾಗಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ವಿದ್ಯಾರ್ಥಿ ನಿಲಯಗಳ ಕೊರತೆ ಉಂಟಾಗಿದೆ. ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಇಲ್ಲದೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಅನನುಕೂಲವಾಗುತ್ತಿದೆ. ದುಬಾರಿ ವಿದ್ಯಾರ್ಥಿ ಪಾಸ್ ಭರಿಸಲು ಸಾಧ್ಯವಾಗದ ಕೆಲವರು ಅವಕಾಶ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಉಚಿತ ಬಸ್‌ಪಾಸ್ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಫೀಕ್ ಅಲಿ, ರಾಜ್ಯ ಕಾರ್ಯದರ್ಶಿ ಮಜೀದ್ ವಿದಾಯತ್, ಪ್ರಶಾಂತ್ ಆರ್ಯ, ನಗರ ಉಪಾಧ್ಯಕ್ಷ ಮೊಹಮ್ಮದ್ ಅದ್ನಾನ್, ಗ್ರಾಮಾಂತರ ಅಧ್ಯಕ್ಷ ಬಾಲರಾಜ್, ಮುಖಂಡರಾದ ಸಾಗರ್ ಸಿರ್ಸಿಕರ, ಸಮೀರ್ ವಿನಯ್, ಈಶ್ವರ್ ಇತರರು ಇದ್ದರು.