ಮೈಸೂರು: ಈಗ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಭಾರತೀಯ ಭಾಷೆಗಳಲ್ಲಿಯೇ ಉನ್ನತ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ಭಾರತೀಯ ಭಾಷೆಗಳ ಪ್ರಚಾರದ ಉನ್ನತ ಅಧಿಕಾರ ಸಮಿತಿ ಮುಖ್ಯಸ್ಥ ಚಾಮು ಕೃಷ್ಣಶಾಸ್ತ್ರಿ ಸಲಹೆ ನೀಡಿದರು.
ನಗರದ ಕೇಂದ್ರೀಯ ಭಾರತೀಯ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಭಾರತೀಯ ಭಾಷಾ ಸಂಸ್ಥಾನದ 55ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಈಗ ಆಂಗ್ಲ ಮಾಧ್ಯಮದಲ್ಲಿ ಉನ್ನತ ಶಿಕ್ಷಣವನ್ನು ನೀಡಲಾಗುತ್ತಿದೆ. ಹಾಗಾಗಿ ಪದವಿ ಜೊತೆಗೆ ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಸೇರಿದಂತೆ ಎಲ್ಲ ಪದವಿಗಳನ್ನು ಭಾರತೀಯ ಭಾಷೆಗಳಲ್ಲಿ ನೀಡುವಂತಾಗಬೇಕು. ಇದಕ್ಕಾಗಿ ಲಭ್ಯವಿರುವ ನೂತನ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು ಎಂದರು.
ಸಿಐಐಎಲ್‌ನಲ್ಲಿ ಹಿಂದಿನ ಪದ್ಧತಿಯನ್ನು ಬಿಟ್ಟು, ಮುಂದಿನ ಐದು-ಹತ್ತು ವರ್ಷದ ದೂರ ದೃಷ್ಟಿಯೊಂದಿಗೆ ಕೆಲಸ ಮಾಡಬೇಕು. ಭಾರತೀಯ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ದೇಶದಲ್ಲಿ ಪ್ರಸ್ತುತ 19 ಸಾವಿರ ಭಾರತೀಯ ಭಾಷೆಗಳಿದ್ದು, ಎಲ್ಲ ಭಾಷೆಗಳನ್ನು ಉಳಿಸುವ ಕೆಲಸ ಆಗಬೇಕು. ಈ ಮೂಲಕ ಭಾಷೆಗಳು ಜನರನ್ನು ಒಗ್ಗೂಡಿಸಬೇಕು ಎಂದು ಹೇಳಿದರು.
ಭಾರತೀಯ ಭಾಷೆಗಳ ಮುಂದೆ ದೊಡ್ಡ ಸವಾಲಿದೆ. ಮಾಧ್ಯಮ ಬಹಳ ಮುಖ್ಯವಾಗುತ್ತದೆ. ಮಾತೃ ಭಾಷೆಯಲ್ಲಿ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಭಾಷೆ ಹೇಳಿ ಕೊಡುವ ಪ್ರಯತ್ನ ಮಾಡಬೇಕು. ಭಾಷಾ ಶಿಕ್ಷಕರಿಗೆ ತರಬೇತಿ ನೀಡಲು ನಾವು ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ದೇಶದಲ್ಲಿ ಸುಮಾರು 90 ಲಕ್ಷದಿಂದ ಒಂದು ಕೋಟಿ ಶಾಲಾ ಶಿಕ್ಷಕರಿದ್ದಾರೆ. ಈ ಪೈಕಿ ಭಾಷಾ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶೇ.30 ಶಾಲಾ ಶಿಕ್ಷಣ, ಶೇ.18 ಉನ್ನತ ಶಿಕ್ಷಣದಲ್ಲಿದ್ದಾರೆ. ಈ ಎಲ್ಲ ಭಾಷಾ ಶಿಕ್ಷಕರು ಕೇವಲ ಒಂದೇ ಭಾಷೆಯಲ್ಲಿ ಪರಿಣತಿ ಹೊಂದಿರುತ್ತಾರೆ. ಅವರು ಮತ್ತೊಂದು ಭಾಷೆ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
2020-21 ಮತ್ತು 2021-22ರಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಸುಮರು 2.65 ಕೋಟಿ ವಿದ್ಯಾರ್ಥಿಗಳು ಈಗ ಇಂಗ್ಲಿಷ್ ಮಾಧ್ಯಮಕ್ಕೆ ಹೋಗಿದ್ದಾರೆ. ತಮಿಳುನಾಡಿನಲ್ಲಿ 2011ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.74 ವಿದ್ಯಾರ್ಥಿಗಳು ಮಾತೃ ಭಾಷೆ ವ್ಯಾಸಂಗ ಮಾಡಿದ್ದರೆ, 2021ಕ್ಕೆ ಆ ಸಂಖ್ಯೆ ಶೇ.55ಕ್ಕೆ ಇಳಿಕೆ ಆಗಿತ್ತು. ಇದು ಕೇವಲ ತಮಿಳುನಾಡಿನ ಸಮಸ್ಯೆ ಮಾತ್ರವಲ್ಲ. ಎಲ್ಲ ಭಾಷೆಯ ಸ್ಥಿತಿಯೂ ಹೀಗೆಯೇ ಇದೆ ಎಂದರು.
ಕನ್ಯಾಕುಮಾರಿ ಮತ್ತು ಕಾಶ್ಮೀರದವರೆಗೆ ಯಾವಾಗಲೂ ಭಾಷೆಯ ಸಮಸ್ಯೆ ಎದುರಾಗಿರಲಿಲ್ಲ. ಒಂದು ಭಾಷೆಯವರು, ಮತ್ತೊಂದು ಭಾಷೆ ಗೌರವಿಸುತ್ತಿದ್ದರು. ಆದರೆ, ಬ್ರಿಟಿಷರು ಬಂದ ಮೇಲೆ ದ್ರಾವಿಡ, ಆರ್ಯರು ಎಂದು ವಿಭಾಗಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ನಿರ್ದಿಷ್ಟ ಭಾಷೆಗೆ ಸೀಮಿತವಾಗದೆ ಎಲ್ಲರೂ ಒಂದಲ್ಲ ಒಂದು ಭಾಷೆಯನ್ನು ಕಲಿಯಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಬಹು ಭಾಷಿಕತೆಗೆ ಆದ್ಯತೆ ದೊರೆಯಲಿದೆ. ದೇಶದ 9 ರಾಜ್ಯಗಳಲ್ಲಿ ಒಂದು ಭಾಷೆ ಮಾತನಾಡುವವರು ಇದ್ದರೆ, ಉಳಿದ ರಾಜ್ಯಗಳಲ್ಲಿ ಬಹುಭಾಷಾ ಪದ್ಧತಿ ಜಾರಿಯಲ್ಲಿದೆ. ಅವುಗಳನ್ನು ಗೌರವಿಸುವ ಮೂಲಕ ತ್ರಿಭಾಷಾ ಸೂತ್ರ ಕಾರ್ಯಗತಗೊಳಿಸಬೇಕಿದೆ. ಇದಕ್ಕೆ ಸಿಐಐಎಲ್ ನಾಯಕತ್ವ ವಹಿಸಬೇಕು ಎಂದರು.
ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರಮೋಹನ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಅಜಿತ್ ಕೆ.ಮೊಹಂತಿ, ಭಾಷಾ ತಜ್ಞರಾದ ಪ್ರೊ.ಜಿ.ರಾಜಗೋಪಾಲ್, ಡಾ.ನಾರಾಯಣಕುಮಾರ್ ಚೌಧರಿ ಇತರರು ಇದ್ದರು.