ಬಾಗಲಕೋಟೆ ನಗರದ ಬಿವಿವಿ ಸಂಘದ ಮೆಡಿಕಲ್ ಕಾಲೇಜಿನ ಶತಾಬ್ಧಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಮತ್ತು ಬಿವಿವಿ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯಗಳ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ತುಮಕೂರಿನ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಪದವಿ ಪ್ರದಾನ ಮಾಡಿದರು 
ಜಿಲ್ಲೆ

ಭಾರತೀಯ ನರ್ಸಗಳಿಗೆ ಜಗತ್ತಿನಾದ್ಯಾಂತ ಬೇಡಿಕೆ

ಬಾಗಲಕೋಟೆ: ಮಾನವಿಯ ಹೃದಯ ಶ್ರೀಮಂತಿಕೆಯುಳ್ಳ ಭಾರತೀಯ ನರ್ಸಗಳಿಗೆ ವಿಶ್ವಾದ್ಯಂತ ಹೆಚ್ಚಿನ ಬೇಡಿಕೆ ಇದೆ ಎಂದು ತುಮಕೂರಿನ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಹೇಳಿದರು.

ನಗರದ ಬಿವಿವಿ ಸಂಘದ ಮೆಡಿಕಲ್ ಕಾಲೇಜಿನ ಶತಾಬ್ಧಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಮತ್ತು ಬಿವಿವಿ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯಗಳ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಬಾಗಲಕೋಟೆ ಉತ್ತಮ ಶೈಕ್ಷಣಿಕ ಕ್ಷೇತ್ರವಾಗಿದ್ದು, ಇದರ ಕೀರ್ತಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ. ಚರಂತಿಮಠ ಅವರಿಗೆ ಸಲ್ಲುತ್ತದೆ. ಅವರ ಸರಳತೆ, ಶೈಕ್ಷಣಿಕ ಕ್ಷೇತ್ರದ ದೂರದೃಷ್ಠಿ ಅವರ ಸೇವಾ ಮನೋಭಾವದಿಂದ ರಾಜ್ಯದಲ್ಲಿ ಬಿವಿವಿ ಸಂಘ ಅತ್ಯುನ್ನತ ಸ್ಥಾನದಲ್ಲಿದೆ. ಇಂತಹ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿರುವ ತಾವೇ ಧನ್ಯರು. ನರ್ಸಿಂಗ ಕಾರ್ಯಕ್ಷೇತ್ರ ಒಂದು ಪುಣ್ಯದ ಕೆಲಸ. ರೋಗಿಯ ಆರೈಕೆಯಲ್ಲಿ ವೈದ್ಯರಷ್ಟೇ ನರ್ಸಗಳೂ ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ. ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟçಗಳಲ್ಲಿ ನರ್ಸಗಳ ಬೇಡಿಕೆ ಬಹಳಷ್ಟು ಇದೆ ಎಂದರು.

ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ. ಚರಂತಿಮಠ ಮಾತನಾಡಿ, ರಾಜ್ಯದಲ್ಲಿ ಬಾಗಲಕೋಟೆಯ ಬಿವಿವಿ ಸಂಘದ ನಾಲ್ಕು ನರ್ಸಿಂಗ್ ಕಾಲೇಜುಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಉತ್ತಮ ಗುಣಮಟ್ಟದ ಬೋಧಕ ಸಿಬ್ಬಂದಿ ಹೊಂದಿದೆ. ಅಂದಾಜು ೧೫ ಕೋಟಿ ರೂ.ವೆಚ್ಚದಲ್ಲಿ ಸಿಮ್ಯುಲೇಶನ್ (ಸ್ಕಿಲ್ ಲ್ಯಾಬ್) ಘಟಕವನ್ನು ಸ್ಥಾಮಿಸಲಾಗುತ್ತಿದ್ದು, ಇದು ದೇಶದಲ್ಲೇ ಎರಡನೇಯ ಘಟಕವಾಗಲಿದೆ. ೧೨ ಕೋಟಿ ವೆಚ್ಚದಲ್ಲಿ ವೃದ್ಧಾಶ್ರಮವನ್ನು ಸ್ಥಾಪಿಸುತ್ತಿದ್ದೇವೆ. ಇಂತಹ ಘಟಕಗಳಲ್ಲಿ ನರ್ಸಗಳ ಬೇಡಿಕೆ ಬಹಳ ಇರುತ್ತದೆ. ಕೋವಿಡ್-೧೯ ಸಂದರ್ಭದಲ್ಲಿ ನಮ್ಮ ನರ್ಸಗಳ ಆರೈಕೆಯ ಪಾತ್ರ ಬಹಳ ಮಹತ್ವದ್ದಾಗಿತ್ತು ಎಂದು ಹೇಳಿದರು.

ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಿಲೀಪ ಎಸ್.ನಾಟೇಕರ್ ಕಾಲೇಜಿನ ಶೈಕ್ಷಣಿಕ ಸಾಧನೆ ವಿವರಿಸಿದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಬಿವಿವಿ ಸಂಘದ ಗೌರವಾನ್ವಿತ ಸದಸ್ಯ, ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ), ಬಿವಿವಿ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಜಯಶ್ರೀ ಇಟ್ಟಿ ಉಪಸ್ಥಿತರಿದ್ದರು. ಪ್ರೊ.ರೇಣುಕರಾಜ ನಾಗಮ್ಮನವರ ನಿರೂಪಿಸಿದರು. ಡಾ.ಶ್ರೀಹರ್ಷ ವಂದಿಸಿದರು.