ಕಲಬುರಗಿ: ವಿಜ್ಞಾನ-ತಂತ್ರಜ್ಞಾನದಲ್ಲೂ ಕಾಣಬಹುದಾದ ಭಾರತೀಯ ಜ್ಞಾನ ಪರಂಪರೆ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.
ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಜ್ಞಾನ ಪರಂಪರೆ ಕುರಿತ ಎರಡು ದಿನದ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದ ಅವರು, ಕಲೆ, ಭಾಷೆ, ಸಾಹಿತ್ಯದಲ್ಲಿ ಮಾತ್ರ ಈ ಜ್ಞಾನ ಪರಂಪರೆ ನೋಡದೆ ವಿಜ್ಞಾನ-ತಂತ್ರಜ್ಞಾನದಲ್ಲೂ ಕಾಣಬಹುದು. ಭಾರತೀಯರು ಪಾರಂಪರಿಕ ಜ್ಞಾನ ಪರಂಪರೆಗೆ ಕುರುಡಾಗದೆ ಸಮಕಾಲೀನ ಅಗತ್ಯಕ್ಕೆ ಅನುಗುಣವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಡಾ.ನಿರಂಜನ್ ನಿಷ್ಠಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯ ಋಷಿ-ಮುನಿಗಳು ಮಹತ್ವದ ಸಾಧನೆ ಮಾಡಿದ್ದಾರೆ. ಆಯುರ್ವೇದ ಸಂಪೂರ್ಣವಾಗಿ ಭಾರತೀಯರ ಸ್ವತ್ತು. ಭಾರತೀಯ ಜ್ಞಾನ ಪರಂಪರೆಯನ್ನು ಉಳಿಸಿ ಬೆಳೆಸುವುದು ಮತ್ತು ಸಮಕಾಲೀನ ಸವಾಲು ಸಮರ್ಥವಾಗಿ ಎದುರಿಸಲು ಅದರ ನೆರವು ಪಡೆಯಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಭಾರತೀಯ ಜ್ಞಾನ ಪರಂಪರೆಯನ್ನು ಸಂದೇಹದಿಂದ ನೋಡುವುದು ಸರಿಯಲ್ಲ. ಅದನ್ನು ಕೇವಲ ಸಂಸ್ಕೃತ ಭಾಷೆಗೆ ಸಿಮಿತಗೊಳಿಸುವ ಕ್ರಮವೂ ಸಲ್ಲದು. ಭಾರತದ ಎಲ್ಲ ಭಾಷೆಗಳಲ್ಲಿ ಸಾಕಷ್ಟು ಶ್ರೀಮಂತ ಸಾಹಿತ್ಯ ಸೃಷ್ಟಿಯಾಗಿದೆ. ಅದೆಲ್ಲವೂ ಭಾರತೀಯ ಜ್ಞಾನ ಪರಂಪರೆ ಎಂದು ಪ್ರತಿಪಾದಿಸಿದರು.
ಕಾರ್ಯಗಾರದ ಸಂಯೋಜಕ ಪ್ರೊ.ಬಸವರಾಜ ಡೋಣೂರ ಮಾತನಾಡಿ, ಭಾರತೀಯ ಜ್ಞಾನ ಪರಂಪರೆ ಪ್ರಾಚೀನವಾಗಿರುವಂತೆ ಸಮಯದ ಪರೀಕ್ಷೆಯಲ್ಲಿ ಗೆದ್ದು ಬಂದಿದೆ. ಭಾರತೀಯರೇ ತಮ್ಮ ಜ್ಞಾನ ಪರಂಪರೆ ಕಡೆಗಣಿಸುವುದು, ಸಂದೇಹದಿಂದ ನೋಡುವುದು ಸರಿಯಲ್ಲ. ದೇಶದ ವಿವಿಗಳ ಪಠ್ಯಕ್ರಮ ಮತ್ತು ಬೋಧನಾ ಕ್ರಮ ಭಾರತೀಯಗೊಳಿಸುವ ಅಗತ್ಯವಿದೆ. ಪಾಶ್ಚಾತ್ಯ ಜ್ಞಾನ ಪರಂಪರೆ ನಿರಾಕರಿಸಬೇಕಿಲ್ಲ. ಆದರೆ ಅದೇ ಅಂತಿಮ ಎಂಬ ನಂಬಿಕೆ ಸಲ್ಲದು. ವ್ಯಾಸ, ವಾಲ್ಮೀಕಿ ಮತ್ತು ಕಾಳಿದಾಸರಂತಹ ಲೇಖಕರು ಭಾರತೀಯ ಎಲ್ಲ ಭಾಷೆಗಳಲ್ಲೂ ಇದ್ದಾರೆ ಎಂದು ಹೇಳಿದರು.
ಸಂಘಟನಾ ಕಾರ್ಯದರ್ಶಿ ಡಾ.ಚೈತನ್ಯ ಆರ್.ಕೆ. ಸ್ವಾಗತಿಸಿ ಕಾರ್ಯಾಗಾರದ ವರದಿ ಪ್ರಸ್ತಾಪಿಸಿದರು. ಡಾ.ಬಸವರಾಜ ಕುಬಕಡ್ಡಿ ವಂದಿಸಿದರು. ಡಾ.ರಾಜೀವ ಜೋಶಿ ನಿರೂಪಣೆ ಮಾಡಿದರು.
ಭಾರತೀಯ ಪರಂಪರೆಯಲ್ಲಿರುವ ಧನಾತ್ಮಕ ಸಂಗತಿ ಸ್ವೀಕರಿಸಬೇಕು. ದೇಶದ ಪ್ರಗತಿಗಾಗಿ ಭಾರತೀಯ ಜ್ಞಾನ ಪರಂಪರೆ ಜತೆಗೆ ಪಾಶ್ಚಿಮಾತ್ಯ ಜ್ಞಾನ ಪರಂಪರೆ ಅನುಸರಿಸಬೇಕು. ನಮ್ಮ ವಿದ್ಯಾರ್ಥಿಗಳು ಇದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಪ್ರತಿಯೊಂದು ವಿವಿಯಲ್ಲೂ ಶೇ.೧೦ ಜ್ಞಾನ ಪರಂಪರೆ ನಮ್ಮ ಪಠ್ಯಕ್ರಮದಲ್ಲಿ ಸೇರಿಸಲಾಗುವುದು.
| ಪ್ರೊ.ಬಟ್ಟು ಸತ್ಯನಾರಾಯಣ
ಸಿಯುಕೆ ಕುಲಪತಿ