ಜಿಲ್ಲೆ

ಭಾರತೀಯ ಒಪ್ಪಂದದ ಕರಾಳ ಅಧ್ಯಾಯ ಕಡೆಗಣನೆ:  ವರ್ಜೀನಿಯಾ ವಿವಿ ಪ್ರಾಧ್ಯಾಪಕ ಆಲ್ಬರ್ಟ್ ಜೇಮ್ಸ್ ಆರ್ನಾಲ್ಡ್

ಮೈಸೂರು

ಭಾರತೀಯ ಒಪ್ಪಂದದ ಪ್ರಕಾರ ಫ್ರೆಂಚ್ ಕೆರಿಬಿಯನ್ ಕಾಲನಿಗಳಲ್ಲಿ ದುಡಿದ ಕಾರ್ಮಿಕರ ದುಸ್ಥಿತಿ ಮತ್ತು ನೋವು ಇತಿಹಾಸದಲ್ಲಿ ಕಡೆಗಣಿಸಲ್ಪಟ್ಟ ಒಂದು ಅಧ್ಯಾಯ ಎಂದು ವರ್ಜೀನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆಲ್ಬರ್ಟ್ ಜೇಮ್ಸ್ ಆರ್ನಾಲ್ಡ್ ಹೇಳಿದರು.

ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಫ್ರೆಂಚ್ ಕೆರಿಬಿಯನ್ ಪ್ರದೇಶದಲ್ಲಿ ಭಾರತೀಯ ಒಪ್ಪಂದ ಮಾಡಿಕೊಂಡ ಕಾರ್ಮಿಕರ ಹೋರಾಟದ ಕುರಿತು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕಡೆಗಣಿಸಲ್ಪಟ್ಟ ಅಧ್ಯಾಯವು ಬ್ರಿಟಿಷ್, ಡಚ್ ಮತ್ತು ಬ್ರೆಜಲಿಯನ್ ವಸಾಹತುಶಾಹಿಗೆ ಸಂಬಂಧಿಸಿದ ವಿಶಾಲವಾದ ಜಾಗತಿಕ ಆರ್ಥಿಕ ವ್ಯವಸ್ಥೆ ಸೆರೆ ಹಿಡಿಯುತ್ತದೆ ಎಂದರು.

ಒಪ್ಪಂದ ಮೇರೆಗೆ ಕಾರ್ಮಿಕರನ್ನು ಕರೆದುಕೊಂಡು ಹೋಗುವ ಪರಿಕಲ್ಪನೆ ಯುರೋಪಿಯನ್ ವಸಾಹತುಶಾಹಿಗೆ ಸಂಬಂಧಿಸಿದ್ದಾಗಿದೆ. ಈ ಕಾರ್ಮಿಕರು ಮೂಲತಃ ಭಾರತ ಮತ್ತು ಆಫ್ರಿಕಾ ದೇಶದವವರು. ಗ್ವಾಡೆಲೋಪ್ ಮತ್ತು ಮಾರ್ಟನಿಕ್‌ನಂತಹ ದ್ವೀಪಗಳಿಗೆ ಭಾರತ, ಚೀನಾ, ಆಫ್ರಿಕಾ ದೇಶದ ಕಾರ್ಮಿಕರು ಕಠಿಣ ಷರತ್ತುಗಳನ್ನೊಳಗೊಂಡ ಒಪ್ಪಂದದ ಮೇರೆಗೆ ತೆರಳುತ್ತಿದ್ದರು ಎಂದು ತಿಳಿಸಿದರು.

19ನೇ, 20ನೇ ಶತಮಾನಗಳಲ್ಲಿ ಸಾವಿರಾರು ಕಾರ್ಮಿಕರು ವಲಸೆ ಹೋಗುವಾಗ ಎದುರಿಸಿದ ಸವಾಲುಗಳು, ಹಡುಗುಗಳಲ್ಲಿ ಸಾಗಿಸುವಾಗ ಎದುರಿಸಿದ ಕಷ್ಟಗಳು, ಕಬ್ಬು ಬೆಳೆಯುವಾಗ ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಕಠಿಣ ಎನ್ನಿಸುವ ಕೆಲಸದ ಪರಿಸ್ಥಿತಿಗಳು, ಪರಕೀಯ ಎಂಬ ಭಾವನೆ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ಎನ್ನುವ ಪರಿಸ್ಥಿಗೆ ಹೊಂದಿಕೊಳ್ಳುವ ಸವಾಲುಗಳು, ತಾಯ್ನಡಿನಿಂದ ದೂರವಾದಾಗ ಆಗುವ ಮಾಸಿಕ ತುಮುಲ ಹೀಗೆ ಅವರು ಎದುರಿಸಿದ ಕಷ್ಟಗಳನ್ನು ಕುರಿತು ವಿವರಿಸಿದರು.

ಸಾವಿರಾರು ಸಂಖ್ಯೆಗಳಲ್ಲಿ ಕಾರ್ಮಿಕರು ವಲಸೆ ಹೋಗಲು ಬಡತನ, ಕ್ಷಾಮ ಮತ್ತು ಗಡಿಪಾರು ಆಗುವ ಭಯವೇ ಕಾರಣ. ಈ ಕಾರ್ಮಿಕರು ತಮ್ಮ ದೀರ್ಘಕಾಲೀನ ವಾಸದಿಂದ ಫ್ರೆಂಚ್ ಕೆರಿಬಿಯನ್‌ನಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಎಂದು ಅಳಿಸಲಾಗದ ತಮ್ಮದೇ ಆದ ಪ್ರಭಾವ ಬೀರಿರುವುದು ವಿಶೇಷ ಎಂದರು.

2ನೇ ವಿಶ್ವಯುದ್ಧದ ಸಮಯದಲ್ಲಿ ಫ್ರಾನ್ಸ್ ದೇಶವು ವಸಾಹತುಶಾಹಿ ಸ್ಥಾನವನ್ನು ರದ್ದುಪಡಿಸಿದಲ್ಲದೆ ಈ ಕಾರ್ಮಿಕರನ್ನು ವಿದೇಶಾಗತ ಪೌರರು ಎಂದು ಗುರುತಿಸಿತು ಎಂದರು.

ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕುಸುಮ್ ಅಗರ್‌ವಾಲ್, ಮೈಸೂರು ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕೆ.ಎಂ. ಚಂದರ್,ಪ್ರೊ. ನಳಿನಿ ಚಂದರ್, ಸಹಾಯಕ ಪ್ರಾಧ್ಯಾಪಕಿ ಚಂದನಾ, ಪ್ರಾಧ್ಯಾಪಕರಾದ ಪ್ರೊ.ಗೀತಾ, ಹಂಸವೇಣಿ, ಮಸರತ್ ಸುಲ್ತಾನ, ವೆಂಕಟೇಶ್ವರ ಭಾಗವಹಿಸಿದ್ದರು.