ಜಿಲ್ಲೆ

ಭಾರತೀಯ ಎಂಬುದೇ ಹೆಮ್ಮೆಯ ಸಂಗತಿ

ಚಿತ್ರದುರ್ಗ: ಭಾರತೀಯ ಎಂಬುದೇ ಬಹುದೊಡ್ಡ ಹೆಮ್ಮೆ ಸಂಗತಿ. ಆದ್ದರಿಂದ ದೇಶ, ಭಾಷೆ, ಸಂಸ್ಕೃತಿಯ ಮೇಲೆ ಅಪಾರ ಗೌರವ ಮೈಗೂಡಿಸಿಕೊಳ್ಳಿ ಎಂದು ಅಂತಾರಾಷ್ಟ್ರೀಯ ಸಾಹಸಿ ಕ್ರೀಡಾಪಟು ಜ್ಯೋತಿರಾಜ್ ತಿಳಿಸಿದರು.

ಕೋಟೆ ಮುಂಭಾಗದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ರಾಜ್ಯ ಬಾಲಭವನ ಸೊಸೈಟಿ, ಜಿಪಂ, ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಈಚೆಗೆ ಹಮ್ಮಿಕೊಂಡಿದ್ದ ವಿಶೇಷ ವಾರಾಂತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವಾದ್ಯಂತ ಭಾರತದ ಕೀರ್ತಿ ಪತಾಕೆ ಹರಿಸಬೇಕಿದೆ. ಅದಕ್ಕಾಗಿ ಸಾಹಸಿ ಕ್ರೀಡೆಗಳಲ್ಲಿ ಮಕ್ಕಳು, ಯುವಸಮೂಹ ತೊಡಗಬೇಕಿದೆ. ಒಲಂಪಿಕ್ ಕ್ರೀಡೆಯಲ್ಲಿ ಮಹಿಳೆಯರೇ ಅತಿ ಹೆಚ್ಚು ಪ್ರಶಸ್ತಿ ಪಡೆಯುತ್ತಿದ್ದಾರೆ. ಆ ನಿಟ್ಟಿನಲ್ಲಿ ಪುರುಷ ಕ್ರೀಡಾಪಟುಗಳು ಸಾಗಬೇಕು ಎಂದು ಸಲಹೆ ನೀಡಿದರು.

ಭಾರತೀಯ ಸೇವಾದಳದ ಅಣ್ಣಯ್ಯ ಮಾತನಾಡಿ, ಸ್ವತಂತ್ರ ಸಂಗ್ರಾಮದಲ್ಲಿ ಭಗತ್‌ಸಿಂಗ್, ಮಹಾತ್ಮ ಗಾಂಧಿ ಇನ್ನೂ ಮುಂತಾದ ಮಹನೀಯರೆ ನಮಗೆ ನಿದರ್ಶನ. ಹೀಗಾಗಿ ಸಾಧನೆ, ಗುರಿ ತಲುಪುವ ವಿಶ್ವಾಸ ಅಗತ್ಯ ಎಂದರು.

ಕಾರ್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ್, ಎಂ.ಕೆ.ವಿಮಲಾಕ್ಷಿ ಇತರರಿದ್ದರು.